ಗುಂಡ್ಲುಪೇಟೆ ತಾಲೂಕಿನ ಕಲ್ಲುಕಟ್ಟೆ ಜಲಾಶಯ ಸಮೀಪ ರೈತರು ಬೆಳಗಿನ ಉಪಹಾರಕ್ಕೆ ಸಿದ್ಧತೆ ಮಾಡುತ್ತಿರುವುದು. 
ಜಿಲ್ಲೆ

ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತ್ಯೇಕವಾಗಿ ನಡೆಸುತ್ತಿರುವ ರೈತರ ಅಹೋರಾತ್ರಿ ಧರಣಿ ಎರಡನೇ ದಿನ ಪೂರೈಸಿದೆ.

ತಾಲೂಕಿನ ದೊಡ್ಡ ಜಲಾಶಯಗಳಾದ ಕಲ್ಲುಕಟ್ಟೆ ಮತ್ತು ನಲ್ಲೂರು ಅಮಾನಿಕೆರೆ ಜಲಾಶಯಗಳಿಗೆ ನದಿ ಮೂಲದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರ ಒಕ್ಕೂಟ ಹಾಗೂ ಆಲಂಬೂರು ಏತ ನೀರಾವರಿ ಯೋಜನೆಯ 4 ನೇ ಹಂತದ ಅಚ್ಚುಕಟ್ಟು ಬೆಳೆಗಾರರು ಕಲ್ಲುಕಟ್ಟೆ ಕೆರೆ ಸಮೀಪ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ಸೋಮವಾರ ರಾತ್ರಿ 10ಗಂಟೆವರೆಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಗುರುಪ್ರಸಾದ್ ಹಾಗೂ ಮಹೇಶ್ ಅವರೊಂದಿಗೆ ಪ್ರತಿಭಟನಾನಿರತರು ಸುಧೀರ್ಘವಾಗಿ ಚರ್ಚಿಸಿ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ಇತ್ತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಸಿರು ಸೇನೆ ಮತ್ತು ರೈತ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಶಿವಪುರ ಮಹದೇವಪ್ಪ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭವಾಗಿದೆ.

ಅಧಿಕಾರಿಗಳಿಗೆ ಒತ್ತಡ ಹೇರಿದ್ದರೂ ಸಹ ಕಚೇರಿ ಕೆಲಸದ ನೆಪವೊಡ್ಡಿ ಪ್ರತಿಭಟನಾನಿರತ ರೈತರ ಸಮಸ್ಯೆ ಕೇಳದೆ ನಿರ್ಲಕ್ಷ್ಯವಹಿಸಿದ್ದಾರೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ವನ್ಯಜೀವಿಗಳ ದಾಳಿ ಹೆಚ್ಚಾಗಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್.ಪ್ರಭಾಕರನ್ ಖುದ್ದಾಗಿ ಆಗಮಿಸಿ ರೈತರ ಅಹವಾಲು ಆಲಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಶಿವಪುರ ಮಹದೇವಪ್ಪ ಮಾತನಾಡಿ ಹೇಳಿದರು.

ಸ್ಥಳದಲ್ಲಿಯೇ ಉಪಾಹಾರ, ಊಟ ತಯಾರಿ: ಎರಡೂ ಕಡೆಗಳಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹಗಲು-ರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಎರಡೂ ಸ್ಥಳಗಳಲ್ಲಿ ರಾತ್ರಿ 10.15 ಜನರು ಉಳಿದುಕೊಳ್ಳುತ್ತಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿಯೇ ರೈತರು ಮಧ್ಯಾಹ್ನ, ರಾತ್ರಿ ಹಾಗೂ ಬೆಳಗಿನ ಆಹಾರ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಶಾಸಕರು ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಖಚಿತ ಭರವಸೆ ನೀಡಬೇಕು. ತಪ್ಪಿದಲ್ಲಿ ಗುರುವಾರ ಟ್ರಾೃಕ್ಟರ್, ಎತ್ತಿನಗಾಡಿಗಳ ಜತೆ ಬಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.