ಮೂಡಿಗೆರೆ: ಸರ್ಕಾರದ ಮಾನದಂಡದ ಪ್ರಕಾರ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಹೆಚ್ಚಾಗಿರುವ ಕಾರಣದಿಂದ ಜಿಲ್ಲೆಯಲ್ಲಿ 12 ಸಾವಿರ, ಮೂಡಿಗೆರೆ ತಾಲೂಕಿನಲ್ಲಿ 1394 ಅನರ್ಹ ಬಿಪಿಎಲ್ ಚೀಟಿಗಳು ಪತ್ತೆಯಾಗಿವೆ. ತಾಲೂಕಿನಲ್ಲಿ 100 ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಇಂದ್ರೇಶ್ ತಿಳಿಸಿದರು.
ಮಂಗಳವಾರ ತಾಪಂನಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಪಡಿತರ ಚೀಟಿಯಲ್ಲಿ ಹೆಸರಿರುವವರು ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಅವರ ಮಾಸಿಕ ಆದಾಯ 50 ಸಾವಿರ ರೂ.ಗಿಂತ ಆಗಿರುವ ಕಾರಣ ಅನೇಕ ಬಿಪಿಎಲ್ ಕಾರ್ಡ್ ರದ್ದುಗೊಂಡಿವೆ. 30 ಅಥವಾ 40 ಅಳತೆಯ ನಿವೇಶನ, ಖಾಸಗಿ 4 ಚಕ್ರದ ವಾಹನ, ಮೈಕ್ರೊ ಫೈನಾನ್ಸ್‌ನಿಂದ ಸಾಲ ಹಾಗೂ ತೆರಿಗೆ ಪಾವತಿದಾರರನ್ನು ಬಿಪಿಎಲ್ನಿಂದ ಹೊರಗಿಡಲಾಗಿದೆ. ಮದುವೆಯಾಗಿರುವ ಮಗಳ ಹೆಸರು ಬಿಪಿಎಲ್ ಚೀಟಿಯಲ್ಲಿ ಮುಂದುವರಿದಿದ್ದರೆ ಕೈಬಿಡಬೇಕು. ಇಲ್ಲವಾದರೆ ಇದುವರೆಗೆ ಪಡೆದಿರುವ ಪ್ರತಿ ಕೆಜಿ ಅಕ್ಕಿಗೆ 36 ರೂ. ಪಾವತಿಸಿ ಕಾರ್ಡ್ ಉಳಿಸಿಕೊಳ್ಳಬಹುದು ಎಂದು ಸಭೆಗೆ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಅನರ್ಹವಾಗಿರುವ ಮತ್ತು ರದ್ದುಗೊಂಡಿರುವ ಬಿಪಿಎಲ್ ಪಡಿತರ ಚೀಟಿಗಳ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಮಾನದಂಡಗಳ ಫಲಕ ಹಾಕುವಂತೆ ಹಾಗೂ ಅನರ್ಹ ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ಪಡಿತರ ಚೀಟಿಗಳನ್ನು ಆಹಾರ ಇಲಾಖೆಗೆ ಹಿಂದಿರುಗಿಸುವಂತೆ ಸೂಚನಾ ಫಲಕವನ್ನು ಹಾಕುವಂತೆ ಆಹಾರ ಇಲಾಖೆ ಅಧಿಕಾರಿ ಇಂದ್ರೇಶ್ ಅವರಿಗೆ ತಿಳಿಸಿದರು.
ಸಮಿತಿ ಸದಸ್ಯ ಭರತ್ ಮಾತನಾಡಿ, 2 ಹೆಕ್ಟೇರ್ ಜಮೀನು, 4 ಚಕ್ರದ ವಾಹನ, ಮೈಕ್ರೊ ಫೈನಾನ್ಸ್ ಸಾಲಗಾರರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಬಾರದು ಎಂದು ಹೇಳಿದಾಗ ದನಿಗೂಡಿಸಿದ ಸದಸ್ಯ ಶ್ರೀನಿವಾಸ್, ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸಕ್ಕೆ ತೆರಳಲು ಕಾರ್ಮಿಕರ ಎಲ್ಲ ಸೇರಿ ಒಬ್ಬರ ಹೆಸರಿನಲ್ಲಿ ಹಳೆಯ ಕಾರುಗಳನ್ನು ಖರೀದಿಸಿಕೊಂಡಿರುತ್ತಾರೆ. ಅಂಥವರ ಪಡಿತರ ಚೀಟಿ ರದ್ದು ಪಡಿಸಬಾರದು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಒಟ್ಟು 22.242 ಗೃಹಜ್ಯೋತಿ ಫಲಾನುಭವಿಗಳಿದ್ದು, ಸರ್ಕಾರದಿಂದ 95.60.746 ರೂ. ಅನುದಾನ ಬಿಡುಗಡೆಯಾಗಿದೆ. ತಾಲೂಕಿನಲ್ಲಿ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಗಿಂತ ಅಧಿಕ ವಿದ್ಯುತ್ ಬಳಸಿರುವ ಫಲಾನುಭವಿಗಳ ಸಂಖ್ಯೆ 6927. ಅವರಿಂದ 2.91.892 ರೂ. ಬಿಲ್ ಪಾವತಿಸಿಕೊಳ್ಳಲಾಗಿದೆ. ಇ-ಸ್ವತ್ತು ರಹಿತ ಮನೆಗಳಿಗೆ ಗ್ರಾಪಂ ಎನ್‌ಒಸಿ ನೀಡಿದರೆ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ ಎಂದು ಮೆಸ್ಕಾಂ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.
2.73.930 ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಅದಕ್ಕಾಗಿ ಸರ್ಕಾರದಿಂದ 1.29 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ನಿಂಗೇಗೌಡ ತಿಳಿಸಿದರು.
29.543 ಗೃಹಲಕ್ಷ್ಮಿ ಫಲಾನುಭವಿಗಳಿದ್ದು, 29.106 ಫಲಾನುಭವಿಗಳಿಗೆ ಮಾಸಿಕ 2 ಸಾವಿರ ರೂ. ಸಂದಾಯವಾಗಿದೆ. ಬಾಕಿ ಉಳಿದವರ ಪಡಿತರ ಚೀಟಿಯ ಸಮಸ್ಯೆಯಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರಾ ಮಾಹಿತಿ ನೀಡಿದರು.
ಬೆಂಗಳೂರಿಗೆ ರಾಜಹಂಸ, ಪಲ್ಲಕ್ಕಿ, ಸ್ಲೀಪರ್ ಕೋಚ್ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲು, ತಾಲೂಕಿನ ಎಲ್ಲ ಅಂಗನವಾಡಿಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯರಾದ ಹೊಸಕೆರೆ ರಮೇಶ್, ಅರುಣ್, ಹರ್ಷ ಮೆಲ್ವಿನ್ ಲಸ್ರಾದೋ, ಬಿ.ಕೆ.ಜಯಮ್ಮ, ನಾರಾಯಣ, ಲೀಲಾವತಿ, ಗುರುವಪ್ಪ, ನವೀನ್, ತಾಪಂ ಇಒ ದಯಾವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರವೀಂದ್ರ ಇತರರಿದ್ದರು.