ಮೂಡಿಗೆರೆ: ಕಾಫಿ ಮಂಡಳಿ ಮೂಡಿಗೆರೆ ಕಚೇರಿಗೆ ಬಾಳೂರು ಹೋಬಳಿಯನ್ನು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಶನಿವಾರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಅವರಿಗೆ ಬಾಳೂರು ಹೋಬಳಿ ಕಾಫಿ ಬೆಳೆಗಾರರು ಮನವಿ ಸಲ್ಲಿಸಿದರು.
ಮನವಿ ಸಲ್ಲಿಕೆ ಬಳಿಕ ಕಾಫಿ ಕೃಷಿಕ ಪರೀಕ್ಷಿತ್ ಜಾವಳಿ ಮಾತನಾಡಿ, ಕಳಸ ತಾಲೂಕು ಕೇಂದ್ರ ಬಾಳೂರಿನಿಂದ 40 ಕಿ.ಮೀ. ದೂರದಲ್ಲಿದೆ. ಕಳಸ ತಾಲೂಕು ಸ್ಥಾಪನೆಯಾದ ಬಳಿಕ ಬಾಳೂರು ಹೋಬಳಿಯನ್ನು ಆ ತಾಲೂಕಿಗೆ ಸೇರಿಸದೆ ಮೂಡಿಗೆರೆ ತಾಲೂಕಿನಲ್ಲಿ ಮುಂದುವರಿಸಲಾಗಿದೆ. ಆದರೆ ಮೂಡಿಗೆರೆ ಪಟ್ಟಣದಲ್ಲಿರುವ ಕಾಫಿ ಮಂಡಳಿ ಕಚೇರಿಯಿಂದ ಬಾಳೂರು ಹೋಬಳಿಯನ್ನು ಹೊರಡಗಿಟ್ಟು ಕಳಸ ಪಣದಲ್ಲಿರುವ ಕಾಫಿ ಮಂಡಳಿ ಕಚೇರಿಗೆ ಸೇರ್ಪಡೆ ಮಾಡಲಾಗಿದೆ ಎಂದರು.
ಕೃಷಿ, ತೋಟಗಾರಿಕಾ, ಕಂದಾಯ ಸೇರಿದಂತೆ ಇತರ ಎಲ್ಲ ಇಲಾಖೆ ಕಚೇರಿ ಕೆಲಸಗಳಿಗೆ ರೈತರು 25 ಕಿ.ಮೀ. ದೂರವಿರುವ ಮೂಡಿಗೆರೆ ಪಟ್ಟಣಕ್ಕೆ ತೆರಳುತ್ತಾರೆ. ಕಾಫಿ ಮಂಡಳಿಯ ಕಚೇರಿ ಕೆಲಸಕ್ಕೆ ಮಾತ್ರ ದೂರದ ಕಳಸ ಪಟ್ಟಣಕ್ಕೆ ಹೋಗಬೇಕಾಗಿದೆ. ಕಳಸ ತಾಲೂಕು ಕೇಂದ್ರಕ್ಕೆ ಬಾಳೂರು ಮಾರ್ಗದಲ್ಲಿ ಓಡಾಡುವ ಬಸ್‌ಗಳು ಕಡಿಮೆ ಇರುವುದರಿಂದ ರೈತರು ಪರದಾಡಬೇಕಾಗಿದೆ. ಅಲ್ಲದೆ ಸಂಬಂಧವೇ ಇಲ್ಲದ ತಾಲೂಕಿನ ಕಾಫಿ ಮಂಡಳಿ ಕಚೇರಿಗೆ ಬಾಳೂರು ಹೋಬಳಿಯನ್ನು ಸೇರ್ಪಡಿಸಿರುವುದು ಸರಿಯಲ್ಲ. ಅಲ್ಲಿನ ಕಚೇರಿಯಿಂದ ಬಾಳೂರು ಹೋಬಳಿಯನ್ನು ಹೊರಗಿಟ್ಟು ಮೂಡಿಗೆರೆ ಕಚೇರಿಗೆ ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.