ಜಿಲ್ಲೆ

ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಜೆಎಸ್ಎಸ್ ವಿದ್ಯಾರ್ಥಿಗಳಿಗೆ ಬಹುಮಾನ

ಮೈಸೂರು: ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜು ಆಯೋಜಿಸಿದ್ದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ನಗರದ ಜೆಎಸ್‌ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ, 30 ಸಾವಿರ ರೂ. ನಗದು ಗೆದ್ದಿದ್ದಾರೆ.
ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿ ಯು. ಜೆ. ಶೀತಲ್, ಎರಡನೇ ವರ್ಷದ ವಿದ್ಯಾರ್ಥಿಗಳಾದ ಅನನ್ಯ ಹಾಗೂ ರೋಹನ್ ವಿ.ಗಂಗಡ್ಕರ್ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ವಿಜೇತರಿಗೆ ಟ್ರೋಫಿ ಹಾಗೂ 30 ಸಾವಿರ ರೂ.ನಗದು ಬಹುಮಾನ ನೀಡಿ ಶುಕ್ರವಾರ ಕರ್ನಾಟಕ ಕಾನೂನು ಪ್ರಾಧಿಕಾರದ ಮುಖ್ಯಸ್ಥರೂ ಆದ ನ್ಯಾಯಮೂರ್ತಿ ಎಸ್.ಆರ್. ಬನ್ನೂರ್‌ಮಠ್, ನಿವೃತ್ತ ನ್ಯಾಯಾಧೀಶರಾದ ಧರ್ಮಗೌಡರ್, ಪ್ರೊ. ಸಿ.ಎಸ್. ಪಾಟೀಲ್ ಗೌರವಿಸಿದರು.
2023ರ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ದೇಶದ ನೂರಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.