ಮಂಜುನಾಥ ಟಿ.ಭೋವಿ ಮೈಸೂರು
ಕಿವಿ ಕೇಳಿಸದ ಮತ್ತು ಮಾತು ಬಾರದವರಿಗೆ ಅಕ್ಷರಾಭ್ಯಾಸ ಮಾಡಿಸುವುದು ಬಲು ಕಷ್ಟ. ಇಂಥ ಮೂಕ ಮಕ್ಕಳ ವೇದನೆಗೆ ಧ್ವನಿಯಾಗಿ, ಶಿಕ್ಷಣ ಕಲಿಸುವ ಪುಣ್ಯ ಕಾಯಕ 120 ವರ್ಷಗಳಿಂದ ನಿರಂತರವಾಗಿ ಸಾಗಿದೆ.
ಇಂತಹ ಸಾಧನೆಯನ್ನು ಸದ್ದಿಲ್ಲದೆ ಮಾಡಿರುವ ಹಿರಿಮೆ ತಿಲಕನಗರದ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಗೆ ಸಲ್ಲುತ್ತದೆ. ಇದು ಈ ವಿಶೇಷ ಮಕ್ಕಳ ಪಾಲಿಗೆ ಮಾತೃಧಾಮ. ಆದರೆ, ತಂತ್ರಜ್ಞಾನವಿಲ್ಲದ ಕಾಲದಲ್ಲೇ ಗತವೈಭವ ಕಂಡ ಈ ಶಾಲೆಯು ಆಧುನಿಕ ಯುಗದಲ್ಲಿ ಸೊರಗಿದ್ದು, ರಾಜಾಶ್ರಯದಲ್ಲಿ ಬಲಿಷ್ಠವಾಗಿದ್ದ ಈ ಜ್ಞಾನದೇಗುಲ ಪ್ರಜಾಪ್ರಭುತ್ವದಲ್ಲಿ ದುರ್ಬಲವಾಗಿ ಕಳೆಗುಂದಿದೆ. ಇದು ಅಂದು-ಇಂದು ನಡುವಿನ ವ್ಯತ್ಯಾಸವಾಗಿದೆ...!
1984ರಿಂದ ಪ್ರತ್ಯೇಕ ಅಸ್ತಿತ್ವ:
ಅಂಧರಿಗೆ ಬೆಳಕಾಗಲು ಮತ್ತು ಮೂಕರಿಗೆ ಕಿವಿಯಾಗಲು ಎಂ.ಶ್ರೀನಿವಾಸರಾಯರು ಅಂಧರ ಮತ್ತು ಕಿವುಡ ಮಕ್ಕಳ ಶಾಲೆಯನ್ನು 1901ರಲ್ಲಿ ಪ್ರಾರಂಭಿಸಿದರು. ಅದಕ್ಕಾಗಿ ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಣಿಗೆ ನೀಡಿದ 9.5 ಎಕರೆ ಜಾಗದಲ್ಲಿ ಶಾಲಾ ಕಟ್ಟಡ ತಲೆ ಎತ್ತಿದೆ.
ಬಳಿಕ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸೇರಿದ ಈ ಶಾಲೆಯಲ್ಲಿ ಅಂಧ, ಕಿವುಡ ಮಕ್ಕಳಿಗೆ ಒಟ್ಟಿಗೆ ಕಲಿಸಲಾಗುತ್ತಿತ್ತು. ಒಂದೇ ಕ್ಯಾಂಪಸ್‌ನಲ್ಲಿ ಅವಳಿ-ಜವಳಿಯಾಗಿದ್ದ ಈ ಶಾಲೆ ಪ್ರತ್ಯೇಕಗೊಂಡಿತು. 1984ರಲ್ಲಿ ಬೇರ್ಪಟ್ಟ ಕಿವುಡ ಮಕ್ಕಳ ಶಾಲೆ ಮತ್ತೊಂದು ಹೊಸ ಕಟ್ಟಡದಲ್ಲಿ ತಳವೂರಿದೆ. ಇದರೊಂದಿಗೆ ಪ್ರತ್ಯೇಕ ಆಡಳಿತ, ಬೋಧಕ, ಬೋಧಕೇತರ ಸಿಬ್ಬಂದಿಯೊಂದಿಗೆ ಸ್ವಂತ ಅಸ್ತಿತ್ವ ಪಡೆದುಕೊಂಡು 37 ವರ್ಷ ಪೂರೈಸಿದೆ.
ಮಕ್ಕಳ ಸಂಖ್ಯೆ ಬರೀ 40:
ಇಲ್ಲಿ ಒಂದು ಕಾಲದಲ್ಲಿ 300 ಮಕ್ಕಳಿದ್ದರು. ಈ ಸಂಖ್ಯೆ ಇದೀಗ 40ಕ್ಕೆ ಕುಸಿದಿದೆ. 110 ಸೀಟುಗಳು ಖಾಲಿಯಾಗಿವೆ. ಅಲ್ಲದೆ, 1ರಿಂದ 10ನೇ ತರಗತಿವರೆಗೆ ಇರುವ ಈ ವಸತಿ ಶಾಲೆಯಲ್ಲಿ ಈ ಹಿಂದೆ 15ರಿಂದ 20 ಶಿಕ್ಷಕರು, 18 ಬೋಧಕೇತರ ಸಿಬ್ಬಂದಿ ಇದ್ದರು. ಇದೀಗ ಕ್ರಮವಾಗಿ 8 ಮತ್ತು 5ಕ್ಕೆ ಇಳಿದಿದೆ.
ನಾಲ್ಕೈದು ವರ್ಷದಿಂದ ಹಾಜರಾತಿ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಇದಕ್ಕೆ ಸರ್ಕಾರವೇ ನೇರ ಕಾರಣ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಖಾಸಗಿ ಕಿವುಡ ಮಕ್ಕಳ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ತನ್ನ ಅಧೀನದ ಈ ಶಾಲೆಯನ್ನು ಸರ್ಕಾರ ನಿರ್ಲಕ್ಷೃ ಮಾಡುತ್ತಿದೆ. ಬನ್ನಿಮಂಟಪ, ಶ್ರೀರಾಂಪುರ, ಶ್ರೀರಂಗಪಟ್ಟಣದಲ್ಲಿ ಖಾಸಗಿ ಶಾಲೆ ನಡೆಸಲು ಸ್ವಯಂಸೇವಾ ಸಂಸ್ಥೆಗಳಿಗೆ ಅನುಮತಿ ಕೊಟ್ಟಿದೆ. ಜತೆಗೆ, ಪ್ರತಿ ಮಗುವಿಗೆ ಅಂದಾಜು 6 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ. ಇದರಿಂದ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದ್ದು, ಪ್ರತಿ ಶಾಲೆಯಲ್ಲಿ ಸುಮಾರು 150 ಮಕ್ಕಳಿದ್ದಾರೆ. ಇದರಿಂದ ಸರ್ಕಾರಿ ಕಿವುಡರ ಶಾಲೆಗೆ ಬರಬೇಕಿದ್ದ ಮಕ್ಕಳು ಆ ಕಡೆಗೆ ಮುಖ ಮಾಡಿದ್ದಾರೆ. ಪರೋಕ್ಷವಾಗಿ ಸರ್ಕಾರವೇ ತನ್ನ ಶಾಲೆಯ ಕತ್ತು ಹಿಸುಕುತ್ತಿದೆ.
ಇಚ್ಛಾಶಕ್ತಿ ತೋರುತ್ತಿಲ್ಲ:
ರಾಜ್ಯದ ಮೈಸೂರು, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ಮಾತ್ರ ಸರ್ಕಾರಿ ಕಿವುಡ ಮಕ್ಕಳ ಶಾಲೆ ಇದೆ. ಮೈಸೂರು ಹೊರತುಪಡಿಸಿದರೆ ಉಳಿದ ಎರಡು ಶಾಲೆಗಳಲ್ಲಿ ಹಾಜರಾತಿ ಕೊಂಚ ಉತ್ತಮವಾಗಿದೆ. ಇರುವ ಈ ಮೂರು ಶಾಲೆಗಳನ್ನು ಸದೃಢಗೊಳಿಸುವ ಕೆಲಸವನ್ನು ಮಾಡಲು ಇಲಾಖೆ ಮತ್ತು ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ.
ಹೊಸತನಕ್ಕೆ ಚಾಲನೆ ನೀಡಿ:
ಈ ಶಾಲೆಯ ಶಿಕ್ಷಣ ವ್ಯವಸ್ಥೆ ಹಳೆಯದ್ದು, ಈಗಲೂ ಸಾಂಪ್ರದಾಯಿಕ ಶಿಕ್ಷಣ ಚಟುವಟಿಕೆಗಳನ್ನೇ ಮುಂದುವರಿಸಿಕೊಂಡು ಬರುತ್ತಿರುವುದು ಮಕ್ಕಳ ಉನ್ನತೀಕರಣಕ್ಕೆ ವೇಗ ಸಿಗುತ್ತಿಲ್ಲ. ಹೀಗಾಗಿ, ನವಶಿಕ್ಷಣ ಪದ್ಧತಿ, ನಾವಿನ್ಯ ತಂತ್ರಜ್ಞಾನ, ಆಧುನಿಕ ಉಪಕರಣ ಅಳವಡಿಕೆ ಮತ್ತು ಕೆಲ ವೈದ್ಯಕೀಯ ಸೌಲಭ್ಯದೊಂದಿಗೆ ಈ ವಿಭಿನ್ನ ಶಾಲೆಯನ್ನು ಜೀರ್ಣೋದ್ಧಾರ ಮಾಡಬೇಕಿದೆ. ಶ್ರವಣದೋಷದ ಕುರಿತು ವೈದ್ಯಕೀಯ ಥೆರಪಿಸ್ಟ್ ಮತ್ತು ಶ್ರವಣ ತಜ್ಞರನ್ನು ಅಗತ್ಯವಾಗಿ ನೇಮಿಸಬೇಕಿದೆ. ಜತೆಗೆ, ಅಗತ್ಯ ಇರುವ ಮೂಲಸೌಕರ್ಯವನ್ನು ಕಲ್ಪಿಸಿಕೊಡುವ ಮೂಲಕ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಮರು ರೂಪಿಸಬೇಕಿದೆ.
ಪೂರ್ವಶಾಲೆ ಆರಂಭಿಸಿ:
ಸಾಮಾನ್ಯ ಶಾಲೆಯಂತೆ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಆರಂಭದಿಂದಲೂ ಇಲ್ಲ. ಈವರೆಗೂ ಈ ಹುದ್ದೆಯನ್ನೇ ಸೃಷ್ಟಿಸಿಲ್ಲ. ಈಗಲಾದರೂ ಈ ಹುದ್ದೆಯನ್ನು ಸೃಜಿಸಿ ನೇಮಕಾತಿ ಮಾಡಿ ಕ್ರೀಡೆ, ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕಿದೆ. ಎಲ್‌ಕೆಜಿ, ಯುಕೆಜಿ ಮಾದರಿಯಲ್ಲಿ ಈ ಮಕ್ಕಳಿಗಾಗಿ ಪೂರ್ವ ಪ್ರಾಥಮಿಕ ಶಾಲೆಯನ್ನು ತೆರೆಯಬೇಕು. ಇದರಿಂದ ಶಾಲೆಯ ಹಾಜರಾತಿ ವೃದ್ಧಿಯಾಗಲಿದೆ. ಜತೆಗೆ, ಅವರ ಕಲಿಕಾ ಅಭಿವೃದ್ಧಿಗೆ ಅನುಕೂಲವಾಗಲಿದೆ. ಶಿಕ್ಷಣ ಇಲಾಖೆ ಪ್ರತಿವರ್ಷ ತನ್ನ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ನೀಡುವಂತೆ ಈ ಶಾಲೆಯ ಶಿಕ್ಷಕರಿಗೂ ತರಬೇತಿ ನೀಡಬೇಕು.
ಬಾಲಕಿಯರಿಗೂ ಇರಲಿ ಹಾಸ್ಟೆಲ್:
ಇಲ್ಲಿ ಬಾಲಕರಿಗೆ ಮಾತ್ರ ಹಾಸ್ಟೆಲ್ ಸೌಲಭ್ಯವಿದ್ದು, ಬಾಲಕಿಯರು ಈ ಸೌಲಭ್ಯದಿಂದ ಶಾಲಾ ಆರಂಭದಿಂದಲೂ ವಂಚಿತರಾಗಿದ್ದಾರೆ. ಈಗಲಾದರೂ ಈ ತಾರತಮ್ಯ ಸರಿಪಡಿಸಿ, ಹೆಣ್ಣುಮಕ್ಕಳಿಗೂ ವಿದ್ಯಾರ್ಥಿನಿಲಯದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಆಗ ಮಾತ್ರ ಬೇರೆ ಜಿಲ್ಲೆಯ ವಿಶೇಷ ಬಾಲಕಿಯರು ಇಲ್ಲಿ ಕಲಿಯಲು ಮುಂದೆ ಬರಲಿದ್ದಾರೆ.
ಪಿಯು ಕಾಲೇಜ್ ಆರಂಭಿಸಿ:
ಎಸ್‌ಎಸ್‌ಎಲ್‌ಸಿ ಬಳಿಕ ಕಿವುಡ ಮಕ್ಕಳು ಮುಂದೆ ಅಭ್ಯಾಸ ಮಾಡಲು ಪೂರಕ ವಾತಾವರಣ, ವ್ಯವಸ್ಥೆ ಇಲ್ಲ. ಸಾಮಾನ್ಯ ಮಕ್ಕಳಂತೆ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಕಲಿಯಲು ಸಾಧ್ಯವಿಲ್ಲ. ಜೆಎಸ್‌ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್, ಬನ್ನಿಮಂಟಪದಲ್ಲಿ ಐಟಿಐ ಕಾಲೇಜು ಬಿಟ್ಟರೆ ಬೇರೆ ಕಡೆ ಕಲಿಯಲು ಅವಕಾಶ ಇಲ್ಲ. ಹೀಗಾಗಿ, ಈ ಕ್ಯಾಂಪಸ್‌ನಲ್ಲೇ ಪದವಿಪೂರ್ವ ಕಾಲೇಜು ಆರಂಭಿಸಿ ವೃತ್ತಿ ಆಧಾರಿತ ಕೋರ್ಸ್ ಕಲಿಸುವ ಮೂಲಕ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ನೆರವಾಗಬೇಕಿದೆ.
10ನೇ ತರಗತಿ ಬಳಿಕ ಶಿಕ್ಷಣ ಮೊಟಕು:
ಇಲ್ಲಿ ಸಾವಿರಾರು ಮಕ್ಕಳು ಉನ್ನತ ಹುದ್ದೆಗೆ ಏರಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಅವರ ಅಂಗವಿಕಲತೆ. ಇಲ್ಲಿ ಕಲಿತ ಬಹುತೇಕರ ಶಿಕ್ಷಣ ಎಸ್‌ಎಸ್‌ಎಲ್‌ಸಿ ಬಳಿಕ ಮೊಟಕುಗೊಂಡಿದೆ. ಅದರಲ್ಲೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮುಂದೆ ಸೆಸ್ಕ್‌ನಲ್ಲಿ ಲೈನ್‌ಮನ್(ಪವರ್‌ಮನ್) ಆಗಿದ್ದಾರೆ. ಆದರೆ, ಉಳಿದ ವೃತ್ತಿಗಳಿಗೆ ಸಂವಹನ ದೋಷದ ಕಾರಣಕ್ಕೆ ಸಾಮರ್ಥ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದೇ ಹೆಚ್ಚು. ಹೀಗಾಗಿ, ಟೈಲರಿಂಗ್ ಇನ್ನಿತರ ಕೌಶಲಾಧಾರಿತ ತರಬೇತಿ ಕಲಿಸಿಕೊಟ್ಟರೆ ಇವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ನೆರವಾಗಲಿದೆ. ಇಲ್ಲವಾದರೆ, ಪರಾವಲಂಬಿಯಾಗಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡೇ ಜೀವನ ಕಳೆದು ಬಿಡಬೇಕಾದ ಪರಿಸ್ಥಿತಿ ಇದೆ.
ನಮ್ಮ ಶಾಲೆಯಲ್ಲಿ ಕೇವಲ ನಾಲ್ಕು ವಿಷಯಗಳನ್ನು ಮಾತ್ರ ಕಲಿಸಲಾಗುತ್ತದೆ. ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್ ಪೈಕಿ ಒಂದನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ಉಳಿದಂತೆ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನವನ್ನು ವಿಶೇಷ ಆಂಗಿಕ ಭಾಷೆ ಮೂಲಕ ಬೋಧಿಸಲಾಗುತ್ತದೆ
ಎಸ್.ಮಂಜುಳಾ, ಶಿಕ್ಷಕಿ
ಕಿವುಡತನ ಹಾಗೂ ಶ್ರವಣೇಂದ್ರಿಯ ದೋಷವುಳ್ಳ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಬೆರೆಯುವುದು ಕಷ್ಟಕರ. ಅಂಧರು ಯೋಚನೆ, ಜ್ಞಾನ, ತಿಳಿವಳಿಕೆ ಶಕ್ತಿ ಇರುವುದರಿಂದ ಕಣ್ಣು ಕಾಣದಿದ್ದರೂ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳಬಹುದು. ಆದರೆ, ಕಿವುಡರಿಗೆ ಕಷ್ಟಕರ. ಅವರಿಗೆ ಭಾವನೆ ವ್ಯಕ್ತಪಡಿಸಲು ಆಗಲ್ಲ. ಹೀಗಾಗಿ, ಈ ಮಕ್ಕಳಿಗೆ ವಿಶೇಷ ಆದ್ಯತೆ ನೀಡಬೇಕು. ಹುಟ್ಟು ಕಿವುಡರು ಉನ್ನತ ಹುದ್ದೆಗಳೇರಿದ್ದು ತೀರ ಕಡಿಮೆ. ಮಧ್ಯಂತರ ಕಿವುಡತನಕ್ಕೆ ಒಳಗಾದವರು ಮಾತ್ರ ಮೀಸಲಾತಿ ಮೂಲಕ ವಿವಿಧ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
ಮುರುಳೀಧರ್, ಶಿಕ್ಷಕ