ಔರಾದ್: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಸಂಬಂಧ ನಡೆಯುತ್ತಿರುವ ನಿಧಿ ಸಮರ್ಪಣೆ ಅಭಿಯಾನಕ್ಕೆ ತಾಲೂಕಿನ ಎಲ್ಲೆಡೆ ಭಾರಿ ಜನಬೆಂಬಲ ಸಿಗುತ್ತಿದೆ. ನಿಧಿ ಸಂಗ್ರಹ ಕಾರ್ಯದಲ್ಲಿ ಮುಸ್ಲಿಂ ಸಮುದಾಯದ ಯುವಕರ ತಂಡವೂ ಸ್ವಯಂಪ್ರೇರಿತರಾಗಿ ತನ್ನನ್ನು ತೊಡಗಿಸಿಕೊಂಡು ಧರ್ಮ ಸಮನ್ವಯತೆ ಸಂದೇಶ ಸಾರಿರುವುದು ಮಾದರಿ ಎನಿಸಿದೆ.
ತಾಲೂಕಿನ ಚಿಂತಾಕಿ ಗ್ರಾಮದಲ್ಲಿ ಖಾಜಾಮಿಯ್ಯಾ ನೇತೃತ್ವದ ತಂಡವು ಜಾತಿ, ಧರ್ಮದ ತಾರತಮ್ಯವನ್ನು ಮರೆತು ಮಾನವರೆಲ್ಲರೂ ಒಂದೇ ಎಂದು ಸಾರಿ ಸೌಹಾರ್ದತೆಯಿಂದ ನಿಧಿ ಸಂಗ್ರಹಕ್ಕೆ ಮುಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ಒಂದು ವಾರದಿಂದ ಇವರ ನೇತೃತ್ವದ ಮುಸ್ಲಿಂ ಯುವಕರ ತಂಡ ರಾಮಮಂದಿರ ನಿಧಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದೆ.
ಸಮಾಜಕ್ಕೆ ಭಾತೃತ್ವ ಸಂದೇಶಗಳನ್ನು ನೀಡಿ, ದೇವನೊಬ್ಬ ನಾಮ ಹಲವು ಎನ್ನುವ ಸಾಮರಸ್ಯದ ನೈಜ ಸಂಗತಿ ಎಲ್ಲರಿಗೂ ಈ ತಂಡ ನೀಡುತ್ತಿದೆ. ಚಿಂತಾಕಿ ಗ್ರಾಮ ಹಾಗೂ ಸುತ್ತಮುತ್ತಲಿನ ಇತರೆ ಗ್ರಾಮಗಳ ಮುಸ್ಲಿಂ ಕುಟುಂಬದವರಿಗೆ ಭೇಟಿಯಾಗಿ ರಾಮ ಮಂದಿರ ನಿಧಿ ಸಂಗ್ರಹಣೆ ಮಾಡುತ್ತಿದೆ. ಈ ತಂಡ 150 ಮುಸ್ಲಿಂ ಪರಿವಾರಗಳಿಗೆ ಭೇಟಿ ನೀಡಿ 40- 50 ಸಾವಿರ ರೂ. ಜಮೆ ಮಾಡಿ ಅಭಿಯಾನ ತಾಲೂಕು ಸಂಚಾಲಕ ಡಾ. ಶಾಲಿವಾನ್ ಉದಗೀರೆ ಅವರಿಗೆ ನೀಡಿದೆ.
ತಾಲೂಕಿನಾದ್ಯಂತ ತಲಾ 5 ಮಂದಿಯನ್ನು ಒಳಗೊಂಡ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದಾರೆ. ₹ 10, 100 ಹಾಗೂ 1000ದ ಮುದ್ರಿತ ಕೂಪನ್ ಮೂಲಕ ಹಣ ಸಂಗ್ರಹಣೆ ಮಾಡಲಾಗುತ್ತಿದೆ. ತಾಲೂಕಿನಿಂದ 25 ಲಕ್ಷ ರೂ. ಸಂಗ್ರಹ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ 5 ಲಕ್ಷ ರೂ. ಜಮೆ ಆಗಿದ್ದು, ಎಲ್ಲ 20 ಲಕ್ಷ ರೂ. ಟೋಕನ್ಗಳು ದಾನಿಗಳು ಪಡೆದಿದ್ದು, ವಾರದೊಳಗೆ ಎಲ್ಲ ಹಣ ಜಮೆ ಆಗಲಿದೆ ಎಂದು ಸಮರ್ಪಣಾ ನಿಧಿ ಕಾರ್ಯಕರ್ತರು ಮಾಹಿತಿ ನಿಡಿದ್ದಾರೆ.
ಸಂವಿಧಾನದ ಆಶಯದಂತೆ ಚಿಂತಾಕಿ ಗ್ರಾಮದ ಮುಸ್ಲಿಂ ಸಮಾಜ ಬಾಂಧವರು, ಜಾತಿ-ಧರ್ಮ ಮರೆತು ಮಾನವರೆಲ್ಲ ಒಂದೇ ಎಂಬ ಸಂದೇಶ ಸಾರಿ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಕಾರ್ಯದಲ್ಲಿ ಕೈಜೋಡಿಸಿ ಭಾತೃತ್ವ ಸಂದೇಶ ಗಟ್ಟಿಗೊಳಿಸಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ಕೆಲಸದಲ್ಲಿ ತೊಡಗಿರುವುದು ಹೆಮ್ಮೆ, ಖುಷಿ ತಂದಿದೆ.| ಡಾ.ಶಾಲಿವಾನ್ ಉದಗೀರೆನಿಧಿ ಸಮರ್ಪಣಾ ಅಭಿಯಾನ ತಾಲೂಕು ಸಂಚಾಲಕ
ಮುಸ್ಲಿಂ ಸಮುದಾಯದ ಯುವಕರು ಶ್ರೀರಾಮ ಮಂದಿರ ನಿಧಿ ಸಂಗ್ರಹಣಾ ಕಾರ್ಯದಲ್ಲಿ ಯಾವುದೇ ಜಾತಿ, ಮತಭೇದವಿಲ್ಲದೆ ಸ್ವಯಂಪ್ರೇರಿತರಾಗಿ ತೊಡಗಿಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಲ್ಲೀನರಾಗಿರುವುದು ಹರ್ಷ ನೀಡಿದೆ. ನಾವೆಲ್ಲರೂ ಮೊದಲು ಭಾರತೀಯರು ಎಂಬ ಸಂದೇಶ ಈ ತಂಡ ನೀಡುತ್ತಿದೆ.| ಅಹ್ಮದ್ ಜಂಬಗಿ, ಸಮಾಜ ಸೇವಕ ಜಂಬಗಿ