ಜಿಲ್ಲೆ

ಮುಸ್ಲಿಂ ಆಸ್ತಿ ರಕ್ಷಣೆಗೆ ಹಿತರಕ್ಷಣಾ ವೇದಿಕೆ ಸ್ಥಾಪನೆ

ಹಾಸನ: ಮುಸಲ್ಮಾನ್ ಸಮುದಾಯಕ್ಕೆ ಸೇರಿದ ಆಸ್ತಿಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹಾಗೂ ಸಮುದಾಯಕ್ಕೆ ಸೇರಿರುವ ಆಸ್ತಿಪಾಸ್ತಿಗಳನ್ನು ಅಕ್ರಮಿಸಿಕೊಂಡಿರುವವರ ವಿರುದ್ಧ ಹೋರಾಟ ಮಾಡುವ ಸಲುವಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮುಸ್ಲಿಂ ಧಾರ್ಮಿಕ ಆಸ್ತಿ ಹಿತರಕ್ಷಣಾ ವೇದಿಕೆ ಸ್ಥಾಪನೆಯಾಗಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಸಮೀರ್ ತಿಳಿಸಿದರು.

ಮುಸ್ಲಿಂ ಸಮುದಾಯದ ಧಾರ್ಮಿಕ ಸ್ಥಳಗಳಾದ ಮಸೀದಿ, ಮದರಸಾ, ದರ್ಗಾ, ವಾಣಿಜ್ಯ ಕಟ್ಟಡಗಳು, ಖಾಲಿ ನಿವೇಶನ ಹಾಗೂ ಕೃಷಿ ಜಮೀನುಗಳ ಬಗ್ಗೆ ಮಾಹಿತಿ ಪಡೆದು ಇದಕ್ಕೆ ಸಂಬಂಧಿಸಿದ ಸಮಿತಿಗಳು ಪಾರದರ್ಶಕವಾಗಿ ಅವರಿಗೆ ಮನವರಿಕೆ ಮಾಡಿಕೊಟ್ಟು ಅಕ್ರಮ ನಡೆದಿದ್ದರೆ ಅದರ ವಿರುದ್ಧ ಹೋರಾಟ ಮಾಡಲು ಸಮಿತಿ ಮುಂದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಸ್ಲಿಂ ಸಮುದಾಯದ ಆಸ್ತಿಗಳು ಅತಿಕ್ರಮಣವಾಗಿದ್ದರೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಅತಿಕ್ರಮಣ ತೆರವು ಮಾಡುವ ಸಲುವಾಗಿ ಹೋರಾಟ ನಡೆಸಲು ಸಮಿತಿ ಸಜ್ಜಾಗಿದೆ. ನಮ್ಮ ಪೂರ್ವಜರು ಈ ಹಿಂದೆ ನೀಡಿದ್ದ ಆಸ್ತಿ, ಕಟ್ಟಡ ಜಮೀನು ಇನ್ನಿತರ ಆಸ್ತಿಪಾಸ್ತಿಯನ್ನು ಗುತ್ತಿಗೆ ನೀಡಿ ಅವಧಿ ಮೀರಿದ ನಂತರವೂ ಅವರಿಂದ ವಾಪಸ್ ಪಡೆದಿದ್ದ ಜಾಗವನ್ನು ಸಹ ಹೋರಾಟಗಾರರ ಮುಖಾಂತರ ರಕ್ಷಣೆ ಮಾಡಲಾಗುವುದು. ದಾನಿಗಳು ನೀಡಿದ ಆಸ್ತಿಗಳಿಂದ ಬರುವ ಲಾಭದ ಹಣವನ್ನು ಸಮುದಾಯದ ಬಡ ಮಕ್ಕಳಿಗೆ, ಅನಾಥ ಮಕ್ಕಳಿಗೆ ದೊರೆಯುವಂತೆ ಮಾಡಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಮಿತಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದು ಹಾಸನ ಜಿಲ್ಲೆಯಲ್ಲಿ ಕೆಲಸ ಆರಂಭಿಸಿದ ಮುಂದಿನ ದಿನಗಳಲ್ಲಿ ಇದನ್ನು ರಾಜ್ಯ ಮಟ್ಟದಲ್ಲಿ ವಿಸ್ತರಿಸಿ ಮುಸಲ್ಮಾನರಿಗೆ ಅವರ ಆಸ್ತಿ ರಕ್ಷಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ. ಅಮಿತ್ ಅನ್ಸಾರಿ, ಅಹಮದ್ ಅಲಿಖಾನ್, ಹಸೀಮ್ ಖಾನ್, ಯಾಸಿನ್ ಪಾಶ, ಇತರರು ಉಪಸ್ಥಿತರಿದ್ದರು.