ಜೆ.ಕೆ.ಸುಗ್ಗರಾಜು ನೆಲಮಂಗಲ
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗ್ರಾಪಂ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದಿಂದ ಪಂಚಾಯಿತಿಯಲ್ಲಿ ಸೇವೆಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಲೆದಾಡುವಂತಾಗಿದೆ.
ತಾಲೂಕಿನ 21 ಗ್ರಾಮಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್‌ಡಿಎ, ವಾಟರ್‌ಮನ್, ಬಿಲ್ ಕಲೆಕ್ಟರ್, ಸ್ವಚ್ಛತಾ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಕೆಲವರು ಗೈರಾಗಿ ಮನೆಯಲ್ಲೆ ಇದ್ದು, ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ ಅಗತ್ಯ ಸೇವೆಗಾಗಿ ಗ್ರಾ.ಪಂ.ಗೆ ಭೇಟಿ ಕೊಡುವ ಜನರು ಬರಿಗೈಲಿ ವಾಪಸ್ ಆಗುವಂತಾಗಿದೆ.
ಪಂಚಾಯಿತಿ ನೌಕಕರ ಬೇಡಿಕೆ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆ ಮೇಲ್ದರ್ಜೆಗೆ, ಕಾರ್ಯದರ್ಶಿ ಗ್ರೇಡ್ ಒನ್ ಹುದ್ದೆಯಿಂದ ಪಿಡಿಒ ಆಗಿ ಮುಂಬಡ್ತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಎಲ್ಲ ನೌಕರರು ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ತಾಲೂಕಿನ ಬೂದಿಹಾಲ್, ಯಂಟಗಾನಹಳ್ಳಿ, ಕಣೇಗೌಡನಹಳ್ಳಿ, ಟಿ.ಬೇಗೂರು, ಶ್ರೀನಿವಾಸಪುರ ಸೇರಿ ಪಂಚಾಯಿತಿಗಳಲ್ಲಿ ಸಾರ್ವಜನಿಕ ಸೇವೆ ಸಂಪೂರ್ಣ ಬಂದ್ ಮಾಡಲಾಗಿದೆ.
ಸಾರ್ವಜನಿಕರ ಅಲೆದಾಟ: ತಾಲೂಕಿನ ಬಹುತೇಕ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ಇ-ಸ್ವತ್ತು ಸೇರಿ ವಿವಿಧ ಕೆಲಸದ ನಿಮಿತ್ತ ಪಂಚಾಯಿತಿ ಕಾರ್ಯಾಲಯಕ್ಕೆ ಕಳೆದ ಅ.4ರಿಂದ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಗ್ರಾಮದ ಕೆಲ ಸಮಸ್ಯೆಗಳನ್ನು ಗ್ರಾಮಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೆ ಅಧಿಕಾರಿಗಳು ಕಚೇರಿಯಲ್ಲಿಲ್ಲ ಎಂದು ಉತ್ತರ ನೀಡುತ್ತಿರುವುದು ಸಾರ್ವಜನಿಕರನ್ನು ಕಂಗೆಡಿಸಿದೆ.
ಕಸದ ಸಮಸ್ಯೆ: ಗ್ರಾಮಪಂಚಾಯಿತಿಯಿಂದ ತ್ಯಾಜ್ಯ ಸಂಗ್ರಹಿಸುವ ವಾಹನ ಹಾಗೂ ಸಿಬ್ಬಂದಿ ನಾಲ್ಕೈದು ದಿನದಿಂದ ಗ್ರಾಮಗಳತ್ತ ಸುಳಿಯದ ಹಿನ್ನೆಲೆಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರು ಗ್ರಾಮದ ರಸ್ತೆ ಬದಿಯಲ್ಲಿ ಕಸ ಬಿಸಾಡುತ್ತಿದ್ದಾರೆ. ಪಂಚಾಯಿತಿ ನೌಕರರು ಪ್ರತಿಭಟನೆ ಮುಂದುವರಿಸಿದರೆ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಗ್ರಾಪಂ ಸಿಬ್ಬಂದಿ ಅಳಲು: ಎಲ್ಲ ರೀತಿ ಜವಾಬ್ದಾರಿ ನಿರ್ವಹಿಸಬೇಕಾದ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಇದೆ, ಮೂಲಸೌಕರ್ಯಗಳಿಲ್ಲ, ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸದ ಒತ್ತಡಕ್ಕೆ ಒಳಗಾಗಿದ್ದಾರೆ. ಕನಿಷ್ಠ ವೇತನ, ಸಿಬ್ಬಂದಿ ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಸಲು ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು, ಸಚಿವರಿಗೆ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಗ್ರಾಪಂ ನೌಕರರು ಅಳಲು ತೋಡಿಕೊಡಿದ್ದಾರೆ.
ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕಿದೆ. ನೌಕರರ ಪ್ರತಿಭಟನೆಯಿಂದ ಗ್ರಾಮಪಂಚಾಯಿತಿಗಳಲ್ಲಿ ನೀರವ ಮೌನ ಅವರಿಸಿದೆ. ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಪಂಚಾಯಿತಿ ನೌಕರರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.ಮಂಜುನಾಥ್ ಸ್ಥಳೀಯ ಮುಖಂಡ ಶ್ರೀನಿವಾಸಪುರ ಊರಿನ ಎಲ್ಲ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಗ್ರಾಪಂ ನೌಕರರು ಈಗ ಅಸಹಾಯಕರಾಗಿದ್ದಾರೆ. ಗ್ರಾಮಾಡಳಿತದ ಅಸ್ತಿತ್ವವಾಗಿರುವ ಪಂಚಾಯಿತಿ ಸಿಬ್ಬಂದಿ ಕೆಲಸದ ಒತ್ತಡ, ಕನಿಷ್ಠ ವೇತನ ಸೇರಿ ಹಲವು ಸಂಕಷ್ಟಗಳಿಗೆ ಸಿಲುಕಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನ ಸೆಳೆಯಲು ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಅವರ ನೋವಿಗೆ ಸ್ಪಂದಿಸಿಲ್ಲ.ಹೆಸರು ಹೇಳಲು ಇಚ್ಛಿಸದ ಪಿಡಿಒ ನೆಲಮಂಗಲ ತಾಲೂಕು