ಚಾಮರಾಜನಗರ : ಸಕಾಲಕ್ಕೆ ವೇತನ ಪಾವತಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮುಷ್ಕರಕ್ಕೆ ತೆರಳಿದ್ದರಿಂದ ರೋಗಿಗಳು ಪರದಾಡುವಂತಾಯಿತು.
ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಮೂರು ಯಂತ್ರಗಳಿದ್ದು ಇಬ್ಬರು ತಾಂತ್ರಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನವೂ ಎರಡು ಪಾಳಿಯಲ್ಲಿ ಆರು ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಆದರೆ, ನಿರ್ವಹಣೆಯ ಹೊಣೆಹೊತ್ತಿರುವ ಎಜೆನ್ಸಿಯು ಸಿಬ್ಬಂದಿಗೆ ಮೂರು ನಾಲ್ಕು ತಿಂಗಳಿನಿಂದ ವೇತನ ನೀಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಅಲ್ಲದೆ, ಸರ್ಕಾರವೂ ಕೂಡ ದೀರ್ಘಕಾಲದ ಬೇಡಿಕೆಗಳನ್ನೂ ಈಡೇರಿಸದೆ ನಿರ್ಲಕ್ಷಿಸಿದೆ ಎಂದು ಆರೋಪಿಸಿ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಬೆಂಗಳೂರಿನಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.
ಇದರಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಬಂದ್ ಆಗಿದ್ದು ಡಯಾಲಿಸಿಸ್‌ಗಾಗಿ ಬಂದ ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಮುಷ್ಕರ ಮುಂದುವರೆದರೆ ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ದುಬಾರಿ ಹಣ ನೀಡಿ ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ಸರ್ಕಾರ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಪ್ರತಿ ತಿಂಗಳೂ ವೇತನ ನೀಡುವಂತೆ ಮಾಡಿ ರೋಗಿಗಳಿಗೆ ಆಗುವ ತೊಂದರೆ ತಪ್ಪಿಸಬೇಕು ಎಂದು ರೋಗಿಯೊಬ್ಬರ ಸಂಬಂಧಿ ಶಿವಣ್ಣ ಒತ್ತಾಯಿಸಿದ್ದಾರೆ.
ಇಬ್ಬರು ಸಿಬ್ಬಂದಿ ಜತೆಗೆ ಗ್ರೂಪ್ ಡಿ ಸಿಬ್ಬಂದಿಯನ್ನು ಆಸ್ಪತ್ರೆಯಿಂದಲೇ ಒದಗಿಸಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರು ಸಿಬ್ಬಂದಿ ಬೆಂಗಳೂರಿನಲ್ಲಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಡಯಾಲಿಸಿಸ್ ಕೇಂದ್ರ ಬಂದ್ ಮಾಡಲಾಗಿದೆ. ತುರ್ತು ವ್ಯವಸ್ಥೆ ಕಲ್ಪಿಸಬೇಕಿದ್ದಲ್ಲಿ ಚಾಮರಾಜನಗರದ ಖಾಸಗಿ ಆಸ್ಪತ್ರೆಗೆ ಕಳಿಸಲಾಗುವುದು.
ಡಾ. ಮಂಜುನಾಥ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ.