ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಕರುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಕೈಯಲ್ಲಿ ಕಬ್ಬು ಹಿಡಿದು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‌್ಯಾಲಿ ಕೈಗೊಂಡು, ಕಬ್ಬಿಗೆ ಬೆಂಬಲ ಬೆಲೆ ನೀಡದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ, ಮಂಜುನಾಥ ಜಲ್ಲಿ, ಸತೀಶ ನಾಯಕ, ಮಲ್ಲಪ್ಪ ಗುಡಗನಟ್ಟಿ, ಬಸವರಾಜ ಕರಡಿಗುಡ್ಡ, ಲಕ್ಷ್ಮೀ ಗಾಡಿವಡ್ಡರ, ತಾಯವ್ವ ತಳವಾರ, ರೂಪಾ ಕೋಲಕಾರ, ಅನ್ನವ್ವ ಕೋಲಕಾರ ಇತರರಿದ್ದರು.
ಕರವೇ ರ‌್ಯಾಲಿ: ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಲೆಯ ಮೇಲೆ ಕಬ್ಬಿನ ಹೊರೆ ಹೊತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿ ರೈತರ ಹೋರಾಟ ಬೆಂಬಲಿಸಿದರು. ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ, ಮಹಾಂತೇಶ ರಣಗಟ್ಟಿಮಠ, ಸಂಗೀತಾ ಕಾಂಬಳೆ, ಅಖಿಲಾ ಪಠಾಣ ಇತರರಿದ್ದರು.
ಯುವ ಸೇನೆ ಬೆಂಬಲ: ಸರ್ಕಾರ ಮತ್ತು ಕಾರ್ಖಾನೆಗಳ ಮಾಲೀಕರು ರೈತರ ನೋವು ಅರ್ಥಮಾಡಿಕೊಂಡು, ಬೇಡಿಕೆಗೆ ಸ್ಪಂದಿಸಬೇಕು ಎಂದು ಕರವೇ ಯುವಸೇನೆ ಕಾರ್ಯಕರ್ತರು ಆಗ್ರಹಿಸಿದರು. ಬಾಳಪ್ಪ ಗುಡಗನಟ್ಟಿ, ಮಹೇಶ ಶೀಗಿಹಳ್ಳಿ, ಬಾಳಪ್ಪ ಪಾಟೀಲ, ಉಮೇಶ ಲಕ್ಕನ್ನವರ, ಅಮಿತ ಸೂರ್ಯವಂಶಿ, ನಿರ್ಮಲಾ ಪಾಟೀಲ ಇತರರಿದ್ದರು.