ಕುಶಾಲನಗರ: ಕುಶಾಲನಗರ ಸಮೀಪದ ಮುಳ್ಳುಸೋಗೆ, ಜನತಾ ಕಾಲನಿ ಹಾಗೂ ಗುಮ್ಮನಕೊಲ್ಲಿ ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ತಾಯಿಯ ಹತ್ತನೇ ವರ್ಷದ ವಾರ್ಷಿಕೋತ್ಸವ ಹಾಗೂ ಪೂಜೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಗ್ಗೆ ದೇವಾಲಯದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಾದೇವಿಯ ಶಾಂತಿ ಹೋಮ, ದಿಗ್ಬಂಧನ, ಹೋಮ ಪೂಜೆ, ಪೂರ್ಣಾಹುತಿ ಮೊದಲಾದ ವಿಧಿ ವಿಧಾನ ನೆರವೇರಿದವು. ಬಳಿಕ ದೇವರನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜಿಸಿ ಮಹಾ ಮಂಗಳಾರತಿ ನಡೆಸಲಾಯಿತು.
ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಪ್ರಸಾದ ವಿತರಣೆ ನಡೆಯಿತು. ಕಣಿವೆ ರಾಮಲಿಂಗೇಶ್ವರ ದೇವಾಲಯದ ಅರ್ಚಕ ರಾಘವೇಂದ್ರ ಭಟ್ ಅವರಿಂದ ಪೂಜಾ ವಿಧಿಗಳು ನೆರವೇರಿದವು.
ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎ.ಕುಮಾರಸ್ವಾಮಿ, ಉಪಾಧ್ಯಕ್ಷ ಎಂ.ಕೆ.ಧನರಾಜು, ಕಾರ್ಯದರ್ಶಿ ಎಂ.ಎಚ್.ಅಣ್ಣೇಗೌಡ, ಸಹ ಕಾರ್ಯದರ್ಶಿ ಎಂ.ಮಂಜುನಾಥ, ಖಜಾಂಚಿ ಎಂ.ಕೆ.ಗಣೇಶ್ ಪದಾಧಿಕಾರಿಗಳಾದ ಸೋಮಶೇಖರ, ಎಂ.ಸಿ.ಮಂಜುನಾಥ, ಎಂ.ಆರ್.ಗೋವಿಂದರಾಜು, ಡಿ.ಅಪ್ಪಣ್ಣ, ಜಯರಾಜು, ವಿಶ್ವನಾಥ್, ಗಣಪತಿ, ಚಂದ್ರು ಮೊದಲಾದವರಿದ್ದರು.