ಜಿಲ್ಲೆ

ಮುಳುಗುತ್ತಿದ್ದವನ ರಕ್ಷಣೆ

ಕಡೂರು: ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಮಸಣದಹಳ್ಳದ ರಸ್ತೆಯಲ್ಲಿ 5 ಹೆಚ್ಚು ಅಡಿ ಎತ್ತರದಲ್ಲಿ ಹರಿಯುತ್ತಿದ್ದ ನೀರಲ್ಲಿ ಕಾರು ಚಲಾಯಿಸಿದಾಗ ಕೊಚ್ಚಿಕೊಂಡುಹೋಗುತ್ತಿದ್ದನ್ನು ಕಂಡ ಸ್ಥಳೀಯರು ಚಾಲಕನನ್ನು ರಕ್ಷಿಸಿದ್ದಾರೆ. ಮಂಗಳವಾರ ಮಸಣದಹಳ್ಳ ತುಂಬಿ ರಸ್ತೆಯಲ್ಲಿ ಹರಿಯುತ್ತಿದ್ದರಿಂದ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಆದರೆ ಜನ ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಸಂಚರಿಸಿದ್ದರು. ಕೇತುಮಾರನಹಳ್ಳಿ ಗ್ರಾಮದ ಗಿರೀಶ್ ಎಂಬಾತ ಮಳೆ ನೀರಿನಲ್ಲಿ ಕಾರು ಚಲಾಯಿಸಿದ್ದರಿಂದ ಕಾರು ಕೊಚ್ಚಿಕೊಂಡು ಹೋಗುತ್ತಿತ್ತು. ಸಹಾಯಕ್ಕಾಗಿ ಕೂಗಿಕೊಂಡಾಗ ಹತ್ತಿರದಲ್ಲಿದ್ದವರು ನೆರವಿಗೆ ಆಗಮಿಸಿ ಕಾರಿನ ಗ್ಲಾಸ್ ಒಡೆದು ರಕ್ಷಿಸಿದರು. ಜೆಸಿಬಿ ತಂದು ಕಾರಿಗೆ ಹಗ್ಗ ಕಟ್ಟಿ ಎತ್ತಿದರು. ಕಾರು ಜಖಂಗೊಂಡಿದೆ. ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದ ತಕ್ಷಣ ರೈಲ್ವೆ ಅಂಡರ್ ಪಾಸ್ ಬಳಿ ಬ್ಯಾರಿಕೇಡ್ ಹಾಕಲಾಗಿತ್ತು. ಜನ ಸ್ಥಳದಲ್ಲಿದ್ದ ಬ್ಯಾರಿಕೇಡನ್ನು ಪಕ್ಕಕ್ಕೆ ಸರಿಸಿ ಓಡಾಡುತ್ತಿದ್ದರು. ಕಾರು ಚಾಲಕ ಕೂಡಾ ಹರಿಯುವ ನೀರಲ್ಲಿ ಹುಚ್ಚಾಟವಾಗಿ ಹೋಗಿದ್ದರಿಂದ ಅಪಾಯಕ್ಕೆ ಸಿಲುಕಿದ್ದ ಎಂದು ಪಿಎಸ್​ಐ ಎನ್.ಪಿ.ನವೀನ್ ಮಾಹಿತಿ ನೀಡಿದರು.