ಬಾಗಲಕೋಟೆ: ಚಾಲುಕ್ಯರ ನಾಡು, ಶರಣರ ಬೀಡು, ಕಲೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತಿಕೆಯ, ಖನಿಜ ಸಂಪತ್ತಿನ ಕಣಜವಾಗಿರುವ ಬಾಗಲಕೋಟೆಗೆ ಹೊಸ ಜಿಲ್ಲೆಯಾಗಿ ಬೆಳ್ಳಿ ಹಬ್ಬದ ಸಂಭ್ರಮ.ಈ ಸುಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ಹಳೇ ವೈಭವ ಕಟ್ಟಿಕೊಂಡು ವರ್ತಮಾನದ ಓರೆ ಕೋರೆಗಳನ್ನು ತಿದ್ದಿಕೊಂಡು, ಭವಿಷ್ಯದಲ್ಲಿ ಹೆಜ್ಜೆ ಗುರುತು ಮೂಡಿಸುವ ಜಿಲ್ಲೆಯಾಗಬೇಕು. ಇದಕ್ಕೆ ಪಕ್ಷ, ಪಂಥಗಳನ್ನು ಬದಿಗೊತ್ತಿ ಒಗ್ಗಟ್ಟಿನ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡಬೇಕು.
ಹೀಗೊಂದು ಒಕ್ಕೂರಲ ಧ್ವನಿ ಮೊಳಗಿದ್ದು ಬಾಗಲಕೋಟೆಯ ನವನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ನಡೆದ ಬಾಗಲಕೋಟೆ ಜಿಲ್ಲೆಗೆ ಬೆಳ್ಳಿ ಸಂಭ್ರಮದ ಕಾರ್ಯಕ್ರಮದಲ್ಲಿ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಕಾರ, ವಿಜಯವಾಣಿ/ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲೆಗೆ ಬೆಳ್ಳಿ ಸಂಭ್ರಮದ ನಿಮಿತ್ತ ವಿಜಯವಾಣಿ ಪತ್ರಿಕೆ ಹೊರತಂದಿರುವ ಬಾಗಲಕೋಟೆ @ 25 ವಿಶೇಷ ಪುರವಣಿ ಬಿಡುಗಡೆ ಸಮಾರಂಭ ಹಾಗೂ ಬಾಗಲಕೋಟೆ ಅಂದು-ಇಂದು ಅವಲೋಕನದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಸಾರ್ವಜನಿಕರು ಹೊರಹಾಕಿದ ಇಂಗಿತ ಇದು.
ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ, ಪ್ರತ್ಯೇಕ ಜಿಲ್ಲೆಯ ಹೋರಾಟ ಸಮಿತಿ ಕಾರ್ಯದರ್ಶಿಯಾಗಿದ್ದ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ನಾಡು ನುಡಿ ಪತ್ರಿಕೆ ಸಂಪಾದಕರು, ಜಿಲ್ಲಾ ಹೋರಾಟದಲ್ಲಿ ಸಕ್ರಿಯರಾಗಿದ್ದ ಹಿರಿಯ ಪತ್ರಕರ್ತ ರಾಮ ಮನಗೂಳಿ, ಉದ್ಯಮಿ ಸಂಗಮೇಶ ನಿರಾಣಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಎಸ್.ಪಾವಟೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ವಿಜಯಪುರ ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್.ರಮೇಶ್ ಅವರು ಬಾಗಲಕೋಟೆ ಅಂದು-ಇಂದು ಎನ್ನುವ ವಿಷಯವಾಗಿ ತಮ್ಮ ಅನುಭವ ಬುತ್ತಿ ಬಿಚ್ಚಿಟ್ಟರು.
ಅಖಂಡ ವಿಜಯಪುರ ಜಿಲ್ಲೆಯ ಭಾಗವಾಗಿದ್ದ ಬಾಗಲಕೋಟೆಯ ಅಂದಿನ ವೈಭವಗಳು, ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲೆ ಶ್ರೀಮಂತಿಕೆಯನ್ನು ಗಣ್ಯರು ಮೆಲುಕು ಹಾಕಿದರು. ಹೊಸ ಜಿಲ್ಲೆಯಾಗಿ ರಚನೆಯಾಗಿ 25 ವಸಂತಗಳನ್ನು ಪೂರೈಸಿದ್ದೇವೆ. ಈ ಅವಧಿಯಲ್ಲಿ ಜಿಲ್ಲೆ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ. ಇನ್ನೂ ಪ್ರಗತಿಯ ಪಥ ಎತ್ತರಕ್ಕೆ ಹೋಗಬೇಕಿತ್ತು ಎನ್ನುವುದು ನಿಜ. ಆದರೆ, ಇದಕ್ಕೆ ಮುಖ್ಯ ಅಡ್ಡಿ ಆಗಿದ್ದೆ ಮುಳುಗಡೆ ಸಮಸ್ಯೆ ಎನ್ನುವ ಇಂಗಿತವನ್ನು ಎಲ್ಲರೂ ಒತ್ತಿ ಹೇಳಿದರು.
ಜೆ.ಎಚ್.ಪಟೇಲ್ ಅವರ ನೆನಪು
ಬಾಗಲಕೋಟೆ ಹೊಸ ಜಿಲ್ಲೆ ರಚನೆಯಾಗಿ 25 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಅಂದು ಹೊಸ ಜಿಲ್ಲೆಗಾಗಿ ನಡೆದ ಹೋರಾಟಗಳನ್ನು ಮೆಲುಕು ಹಾಕಲಾಯಿತು. ಹೊಸ ಜಿಲ್ಲೆಗಳ ರಚನೆಗೆ ಇಚ್ಛಾಶಕ್ತಿ ತೋರಿಸಿ, ಅದನ್ನು ಅನುಷ್ಠಾನಕ್ಕೆ ತಂದ ದಿ. ಮಾಜಿ ಸಿಎಂ ಜೆ.ಎಚ್.ಪಟೇಲ್ ಸರ್ಕಾರದ ಬಗ್ಗೆ ಅಭಿಮಾನ ಪೂರ್ವಕ ಮಾತುಗಳು ಕೇಳಿ ಬಂದವು. ಹೊಸ ಜಿಲ್ಲೆ ರಚನೆಯ ಹರಿಕಾರ ಜೆ.ಎಚ್.ಪಟೇಲ್ ಅವರ ನೆನಪಿಗಾಗಿ ಪುತ್ಥಳಿ ನಿರ್ಮಾಣ ಆಗಬೇಕು ಎನ್ನುವ ಸಲಹೆಗಳು ತೂರಿ ಬಂದವು.
48 ಪುಟಗಳ ಪುರವಣಿ ಲೋಕಾರ್ಪಣೆ
1997ರ ಆಗಸ್ಟ್ 15 ರಂದು ಅಂದು ಮುಖ್ಯಮಂತ್ರಿ ಆಗಿದ್ದ ಜೆ.ಎಚ್.ಪಟೇಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಸಮ್ಮುಖದಲ್ಲಿ ಬಾಗಲಕೋಟೆ ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತ್ತು. ಇದೀಗ ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷ ಗತಿಸಿದ ಹಿನ್ನ್ನೆಲೆಯಲ್ಲಿ ವಿಜಯವಾಣಿ ಪತ್ರಿಕೆ ಹೊರತಂದಿರುವ 48 ಪುಟಗಳ ಆಕರ್ಷಕ ಬಾಗಲಕೋಟೆ @ 25 ವಿಶೇಷ ಪುರವಣಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಲೋಪಾರ್ಪಣೆ ಮಾಡಿದರು. ಇದಕ್ಕೆ ನೂರಾರು ಜನರು ಸಾಕ್ಷಿಯಾದರು.