ತೀರ್ಥಹಳ್ಳಿ: ಎಲೆಚುಕ್ಕೆ ರೋಗದಿಂದ ಸಂಕಷ್ಟಕ್ಕೀಡಾಗಿರುವ ರೈತರ ಸಮಸ್ಯೆ ಮತ್ತು ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸುವ ಸರ್ಕಾರದ ನಿಲುವನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ನ.28ರಂದು ಆಯನೂರಿನಿಂದ ಶಿವಮೊಗ್ಗದವರೆಗೆ ಪಾದಯಾತ್ರೆ, ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಹಕ್ಕನ್ನು ರದ್ದುಪಡಿಸಿ, ಕಾನೂನು ಮೊರೆ ಹೋಗಲು ಅವಕಾಶವಿಲ್ಲದಂತೆ ಸಂತ್ರಸ್ತರನ್ನು ಒಕ್ಕಲೆಬ್ಬಿಸುವ ಸರ್ಕಾರದ ಸಂಚನ್ನು ಖಂಡಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಣದೀಪ್‌ಸಿಂಗ್ ಸುರ್ಜೆವಾಲಾ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಿನಲ್ಲಿ 45 ಸಾವಿರ ಎಕರೆಗೂ ಹೆಚ್ಚು ಅಡಕೆ ತೋಟಗಳಿಗೆ ಹಾನಿ ಸಂಭವಿಸಿದ್ದರೂ, ಸರ್ಕಾರ ಈವರೆಗೂ ಸರಿಯಾದ ಕ್ರಮ ಕೈಗೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಪೂರಕವಾದ ಯಾವುದೇ ಕಾರ್ಯಕ್ರಮವೂ ಜಾರಿಯಾಗಿಲ್ಲ. ಭೂತಾನ್‌ನಿಂದ ಬರುತ್ತಿರುವ ಅಡಕೆ ಸ್ಥಳೀಯ ಅಡಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಶಾಸಕ ಹರತಾಳು ಹಾಲಪ್ಪನವರೇ ಹೇಳಿದ್ದಾರೆ. ಆದರೆ ಗೃಹ ಸಚಿವರು ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿರುವುದು ಆಶ್ಚರ್ಯದ ಸಂಗತಿ ಎಂದರು.
ಕಾಡು ಪ್ರಾಣಿಗಳಿಂದ ಸಂಭವಿಸಿರುವ ಹಾನಿಗೆ ಪರಿಹಾರವೂ ಬಂದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಅಡಕೆಗೆ ಕೊಳೆರೋಗ ತಗುಲಿದಾಗ ಸರ್ಕಾರ ತೀರ್ಥಹಳ್ಳಿ ತಾಲೂಕಿನ ರೈತರಿಗೆ 17 ಕೋಟಿ ರೂ. ಪರಿಹಾರ ನೀಡಲಾಗಿತ್ತು. ಈ ಕ್ಷೇತ್ರದ ಶಾಸಕರು ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ತಾಲೂಕಿಗೆ ಈ ವರೆಗೆ ಕೇವಲ 38 ಲಕ್ಷ ರೂ. ಬಂದಿದೆ. ಈ ಸಮಸ್ಯೆಗೆ ಪರಿಹಾರ ರೂಪಿಸುವ ಕಾಳಜಿ ಸರ್ಕಾರಕ್ಕಿಲ್ಲವೇ ಎಂದು ಪ್ರಶ್ನಿಸಿದರು.