ಜಿಲ್ಲೆ

ಮುಲ್ಲಾ ಓಣಿಯಲ್ಲಿ ಖಾಕಿ ಸರ್ಪಗಾವಲು

ಹುಬ್ಬಳ್ಳಿ: ಕರೊನಾ ಸೋಂಕು ಪತ್ತೆಯಾದ ಮುಲ್ಲಾ ಓಣಿ ಸುತ್ತಮುತ್ತಲ ಪ್ರದೇಶಗಳನ್ನು ಕಂಟೈನ್​ವೆುಂಟ್ ಪ್ರದೇಶ ಎಂದು ಘೊಷಿಸಲಾಗಿದ್ದು, ಖಾಕಿ ಸರ್ಪಗಾವಲು ಹಾಕಲಾಗಿದೆ.

ಡಾಕಪ್ಪ ವೃತ್ತ ಸುತ್ತಮುತ್ತ ಕೆಎಸ್​ಆರ್​ಪಿ ಶಿಗ್ಗಾಂವಿಯ 3 ತುಕಡಿಗಳನ್ನು ನೇಮಿಸಲಾಗಿದೆ. ಒಂದು ತುಕಡಿಯಲ್ಲಿ 25 ಸಿಬ್ಬಂದಿ ಇರುತ್ತಾರೆ. ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಮನೆ ಬಿಟ್ಟು ಯಾರೂ ಹೊರಗೆ ಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಲಾಠಿ ಹಿಡಿದು ಓಡಾಡುತ್ತಿದ್ದಾರೆ. ಇದರಿಂದ ರಸ್ತೆಗಳು ಭಣಗುಡುತ್ತಿದ್ದವು.

‘ನಮ್ಮ ಸಿಬ್ಬಂದಿಗೆ 2 ದಿನಕ್ಕೆ ಒಂದು ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ವಾಶ್ ಕೊಡುತ್ತಿದ್ದೇವೆ. ಸ್ಥಳೀಯ ಠಾಣೆಯಿಂದ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜನರ ಸಹಕಾರ ಉತ್ತಮವಾಗಿದೆ’ ಎಂದು ಕೆಎಸ್​ಆರ್​ಪಿ ಆರ್​ಪಿಐ ಸುಲೇಮಾನ್ ಹಂಚಿನಮನಿ ‘ವಿಜಯವಾಣಿ’ಗೆ ತಿಳಿಸಿದರು.

ಮನೆ ಬಾಗಿಲಿಗೆ ತರಕಾರಿ

ಕಂಟೈನ್​ವೆುಂಟ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ತರಕಾರಿ, ಕಿರಾಣಿ ಸಾಮಗ್ರಿ ಖರೀದಿಗೆ ಅವಕಾಶ ಮಾಡಲಾಗಿತ್ತು. ಬೀದಿಗಳಲ್ಲಿ ತಳ್ಳು ಗಾಡಿಗಳು ಮತ್ತು ಟಂಟಂ ವಾಹನಗಳಲ್ಲಿ ತರಕಾರಿ ವ್ಯಾಪಾರಿಗಳು ಬಂದಿದ್ದರು. ಮನೆಯಿಂದ ಒಬ್ಬೊಬ್ಬರೇ ಹೊರಗೆ ಬಂದು ಸಾಮಾಜಿಕ ಅಂತರದೊಂದಿಗೆ ಖರೀದಿಸಿ ವಾಪಸಾದರು.

ರಸ್ತೆಯಲ್ಲಿ ಮಕ್ಕಳ ಆಟ

ಮುಲ್ಲಾ ಓಣಿಯ ಕೂಗಳತೆ ದೂರದಲ್ಲಿನ ಕಂಟೈನ್​ವೆುಂಟ್ ಪ್ರದೇಶ ಗವಿ ಮೊಹಲ್ಲಾದಲ್ಲಿ ಮಕ್ಕಳು ನಿರಾತಂಕವಾಗಿ ರಸ್ತೆ ಮೇಲೆ ಬ್ಯಾಡ್ಮಿಂಟನ್ ಆಡುತ್ತಿದ್ದರು. ಹಿರಿಯರು ಕೂಡ ರಸ್ತೆ ಮೇಲೆ ಆರಾಮಾಗಿ ಓಡಾಡಿಕೊಂಡಿದ್ದ ದೃಶ್ಯ ಕಂಡು ಬಂತು. ಪೊಲೀಸರು ಗದರಿಸಿದ ನಂತರ ಅವರೆಲ್ಲ ಮನೆ ಸೇರಿಕೊಂಡರು.