ರಾಮನಗರ: ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಸಂಗ್ರಹವಾಬೇಕಿರುವ ರಾಜಸ್ವವನ್ನು ಮುಲಾಜಿಲ್ಲದೆ ವಸೂಲಿ ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನವರಿ 2022ರ ಅಂತ್ಯಕ್ಕೆ ಕಲ್ಲು ಗಣಿ ಗುತ್ತಿಗೆ ರಾಜಸ್ವ 36.77 ಕೋಟಿ ರೂ. ಸಂಗ್ರಹವಾಗಿದ್ದು, ಶೇ.76.6 ಸಾಧನೆ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ನಿಗದಿಪಡಿಸಿರುವ ಗುರಿ ಸಾಧಿಸಬೇಕು ಹಾಗೂ ಬಾಕಿಯಿರುವ ರಾಜಸ್ವ ಸಂಗ್ರಹಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ 120 ಬ್ಲಾಕ್‌ಗಳಿದ್ದು, 5 ಭೂ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ರಾಜಸ್ವ ಸಂಗ್ರಹಿಸುವ ಕಾರ್ಯ ಹಂಚಿಕೆ ಮಾಡಬೇಕು. ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದರು.
ಗಣಿಗಾರಿಕೆ ಬಾಕಿ ಅರ್ಜಿ ವಿಲೇವಾರಿ ಮಾಡಿ: ಗಣಿಗಾರಿಕೆಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ 23 ಅರ್ಜಿಗಳ ಪೈಕಿ 6ಕ್ಕೆ ಸರ್ಕಾರದಿಂದ ಅನುಮೋದನೆಯಾಗಿವೆ. ಉಳಿದ ಅರ್ಜಿಗಳ ಪೈಕಿ 9 ಪ್ರಕರಣಗಳು ಕಾವೇರಿ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯ ಹಾಗೂ ಜಂಟಿ ಮೋಜಿಣಿ ಕಾರ್ಯ ಕುರಿತಂತೆ ಬಾಕಿ ಇದ್ದು, ಈ ಪ್ರಕರಣಗಳನ್ನು ಎರಡು ಇಲಾಖೆಗಳು ಶೀಘ್ರ ಪರಿಶೀಲಿಸಿ ವರದಿ ನೀಡಿ ವಿಲೇವಾರಿ ಮಾಡುವಂತೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ಸೂಚಿಸಿದರು.
ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಕಲ್ಲುಗಣಿಗಾರಿಕೆ ಮಾಡಬಹುದಾದ 12 ಬ್ಲಾಕ್‌ಗಳನ್ನು 51.30 ಎಕರೆ ವಿಸ್ತೀರ್ಣದಲ್ಲಿ ಗುರುತಿಸಿದ್ದು, ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಬಾಕಿ ಇರುವುದನ್ನು ಗಮನಿಸಿದ ಸಚಿವರು, ಜಂಟಿ ಪರಿಶೀಲನೆ ಮಾಡಿ ನಿಯಮಾನುಸಾರ ಪತ್ರ ನೀಡಿ. ಇದರಿಂದ ಬ್ಲಾಕ್‌ಗಳನ್ನು ಹರಾಜು ಮಾಡಿ ರಾಜಸ್ವ ಕೂಡ ಸಂಗ್ರಹಿಸಬಹುದು, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬಹುದು ಎಂದು ಸಚಿವ ಆಚಾರ್ ಹಾಲಪ್ಪ ಹೇಳಿದರು.
53.76 ಲಕ್ಷ ರೂ.ದಂಡ ವಸೂಲಿ: ಗಣಿಗಾರಿಕೆ ಸಂಬಂಧಿಸಿದಂತೆ ಸಾಗಾಣಿಕೆಗೆ ಒಂದು ರಾಜ್ಯ - ಒಂದು ಜಿಪಿಎಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಸಾಗಾಣಿಕೆ ಸಂದರ್ಭದಲ್ಲಿ ವೇ ಬ್ರಿಡ್ಜ್‌ನಲ್ಲಿ ತೂಕಮಾಡಿದ ಟ್ಯಾಗ್ ಸಹ ಇರಬೇಕು. ಇದರಿಂದ ಒಂದು ಲೋಡ್‌ಗೆ ಪರವಾನಗಿ ಪಡೆದು ಹೆಚ್ಚು ಸಾಗಾಣಿಕೆ ಮಾಡುವುದನ್ನು ತಡೆಯಲಾಗುವುದು ಎಂದರು. ಏ.2021ರಿಂದ ಜ.2022ರವರೆಗೆ ಅನಧಿಕೃತ ಖನಿಜ ಸಾಗಾಣಿಕೆಗೆ ಸಂಬಂಧಿಸಿದಂತೆ 15 ಪ್ರಕರಣಗಳನ್ನು ದಾಖಲಿಸಿ 8.78 ಲಕ್ಷ ರೂ.ದಂಡ, ಅನಧಿಕೃತ ಖನಿಜ ಸಾಗಾಣಿಕೆಗೆ ಸಂಬಂಧಿಸಿದಂತೆ 125 ಪ್ರಕರಣಗಳನ್ನು ದಾಖಲಿಸಿ 44.98 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಚಿವ ಆಚಾರ್ ಹಾಲಪ್ಪ ಮಾಹಿತಿ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಸಿಎ ನಿವೇಶನ ಗುರುತಿಸಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಿ.ಎ ನಿವೇಶನಗಳನ್ನು ಗುರುತಿಸಬೇಕು. ರಾಮನಗರ ಜಿಲ್ಲೆಯಲ್ಲಿ ಬಹಳಷ್ಟು ಕಾರ್ಖಾನೆಗಳಿದ್ದು, ಸಿಎಸ್‌ಆರ್ ಅನುದಾನದಲ್ಲಿ ಕೊರತೆ ಇರುವ ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಿ. ಅಂಗನವಾಡಿಗಳಿಗೆ ನೀಡಲಾಗಿರುವ ತೂಕ ಮಾಡುವ ಉಪಕರಣ, ಮೊಬೈಲ್ ಫೋನ್ ಸೇರಿ ವಿವಿಧ ಉಪಕರಣಗಳ ಕಾರ್ಯನಿರ್ವಹಣೆಯ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ 80 ಅಂಗನವಾಡಿ ಕಟ್ಟಡಗಳ ಉನ್ನತೀಕರಣಕ್ಕಾಗಿ 80 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಇಲ್ಲಿ ಆಟಿಕೆ ಸಾಮಗ್ರಿಗಳನ್ನು ಅಳವಡಿಸಿರುವ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಕಲಿಕೆಯೊಂದಿಗೆ ಆಟವೂ ಇರಬೇಕು ಎಂದರು. ಅಂಗನವಾಡಿ ಮಕ್ಕಳಿಗೆ ಬಹುಧಾನ್ಯ ಮಿಶ್ರಣ ಪೌಡರ್ ನೀಡಲಾಗುತ್ತಿದ್ದು, ಇದನ್ನು ಗುಣಮಟ್ಟ ಪರೀಕ್ಷೆಗಾಗಿ ಮೈಸೂರಿನ ಸಿಎಫ್‌ಟಿಆರ್‌ಐಗೆ ಕಳುಹಿಸಿಕೊಡಿ. ಇದರಿಂದ ಮಕ್ಕಳಿಗೆ ನೀಡಲಾಗುವ ಆಹಾರ ಗುಣಮಟ್ಟ ಕಳಪೆಯಾಗಿದ್ದರೆ ಸುಲಭವಾಗಿ ಪತ್ತೆ ಹಚ್ಚಬಹುದು ಎಂದರು. ಕೋವಿಡ್‌ನಿಂದ ಇಬ್ಬರು ಪಾಲಕರನ್ನು ಕಳೆದುಕೊಂಡ 5 ಮಕ್ಕಳಿದ್ದು, ಇವರಿಗೆ ಸಹಾಯಧನ ಒದಗಿಸಲಾಗುತ್ತಿದೆ. ಜತೆಗೆ ಈ ಮಕ್ಕಳ ಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವ ವ್ಯವಸ್ಥೆಗಳಿದ್ದರೆ ಒದಗಿಸಿ ಎಂದರು.
ರಾಮನಗರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ರಾಮ್ ಪ್ರಸಾದ್ ಮನೋಹರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ, ಜಿಪಂ ಸಿಇಓ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಡಾ.ನಂದನ್ ಕುಮಾರ್ ಜೆ.ವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್, ಭೂ ವಿಜ್ಞಾನಿ ಗಿರೀಶ್ ಮೋಹನ್ ಮುಂತಾದವರು ಇದ್ದರು.