ಜಿಲ್ಲೆ

ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ : ಸ್ವಚ್ಛ ಭಾರತ ಅಭಿಯಾನದಲ್ಲಿ ಸಂಸದ ಮುನಿಸ್ವಾಮಿ ಅಧಿಕಾರಿಗಳಿಗೆ ಸಲಹೆ

ಕೋಲಾರ: ಸರ್ಕಾರಿ ಜಾಗ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

ತಾಲೂಕಿನ ಮುದವತ್ತಿ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.

ಸಾರ್ವಜನಿಕ ಸ್ವತ್ತುಗಳನ್ನು ಅತಿಕ್ರಮಣ ಮಾಡಿಕೊಳ್ಳುವುದು ಹೆಚ್ಚುತ್ತಿದೆ. ಇದು ಕಂಡುಬಂದೊಡನೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಯಾವ ರಾಜಕಾರಣಿ, ಮೇಲಧಿಕಾರಿ ಒತ್ತಡಕ್ಕೂ ಮಣಿಯದೆ ಸರ್ಕಾರಿ ಸ್ವತ್ತನ್ನು ಉಳಿಸಲು ಪ್ರಯತ್ನಿಸಬೇಕು ಎಂದರು.

ಸಾಮಾನ್ಯವಾಗಿ ಪ್ರಭಾವಿಗಳು ಸರ್ಕಾರಿ ಜಾಗ ಒತ್ತುವರಿ ಮಾಡುವುದು ಹೆಚ್ಚು. ಒತ್ತುವರಿಯಾಗಿದೆ ಎಂದು ದೃಢಪಟ್ಟರೆ ಒತ್ತುವರಿದಾರನಿಗೆ ನೋಟಿಸ್​ ನೀಡುವ ಅವಶ್ಯಕತೆ ಇರುವುದಿಲ್ಲ. ನೋಟಿಸ್​ ನೀಡಿದರೆ ಮುಂದೆ ನ್ಯಾಯಾಲಯಗಳ ಮೊರೆ ಹೋಗುವವರಿಗೇನೂ ಕಡಿಮೆಯಿಲ್ಲ. ಹಾಗಾಗಿ ಅಧಿಕಾರಿಗಳು ಯಾರ ಪ್ರಭಾವಕ್ಕೂ ಒಳಗಾಗದೆ, ನಿರ್ಭೀತಿಯಿಂದ ತೆರವು ಕಾರ್ಯಾಚರಣೆ ಮಾಡಬೇಕು ಎಂದರು.

ಇನ್ನು ಸಾರ್ವಜನಿಕ ಸ್ವತ್ತುಗಳು ಕಣ್ಣೆದುರೇ ಒತ್ತುವರಿಯಾಗುತ್ತಿದ್ದರೂ ಸಾರ್ವಜನಿಕರು ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂಬ ಮನೋಭಾವ ತೋರುವುದು ಸರಿಯಲ್ಲ. ಸರ್ಕಾರಿ ಜಾಗ ರಕ್ಷಣೆ ಮಾಡುವ ಹೊಣೆ ಅಧಿಕಾರಿಗಳ ಮೇಲಿದೆಯಾದರೂ ಸಾರ್ವಜನಿಕರ ಸಹಕಾರ ಸಹ ಅಷ್ಟೇ ಮುಖ್ಯವಾಗುತ್ತದೆ. ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಅಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿಸುವ ಸಂದರ್ಭದಲ್ಲೂ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲಬೇಕು ಎಂದರು.

ಸಾರ್ವಜನಿಕ ಸ್ವತ್ತುಗಳ ಸಂರಕ್ಷಣೆ ಜತೆಗೆ ರಸ್ತೆ, ಶಾಲೆ, ದೇವಾಲಯ, ಕೆರೆ, ಕಾಲುವೆ ಮತ್ತು ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಬಿಡಬೇಕು. ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್​ ಬಳಕೆ ತ್ಯಜಿಸಿ, ಸಸಿ ನೆಡಲು ಮುಂದಾಗಬೇಕು ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ಪ್ರತಿಯೊಬ್ಬರೂ ಕೆಲಸ ಮಾಡೋಣ. ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಲು ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು. ತಿಂಗಳಿನ 2 ಶನಿವಾರಗಳಂದು ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು, ನಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯವಂತರಾಗಿ ಬಾಳಲು ಪಣ ತೊಡೋಣ ಎಂದು ಮುನಿಸ್ವಾಮಿ ತಿಳಿಸಿದರು.

ಒತ್ತುವರಿ ತೆರವು: ಮುದುವತ್ತಿ ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿದ ಸಂಸದ ಮುನಿಸ್ವಾಮಿ, ಒತ್ತುವರಿದಾರರಿಗೆ ತಿಳಿಹೇಳಿ ಒತ್ತುವರಿ ನಿಮಾರ್ಣಗಳನ್ನು ತೆರವುಗೊಳಿಸಲು ಸೂಚಿಸಿದರು. ಒತ್ತುವರಿದಾರರು ಸಂಸದರ ಮಾತಿಗೆ ಮಣಿದು ಸ್ವಪ್ರೇರಣೆಯಿಂದ ತೆರವಿಗೆ ಸಹಕರಿಸಿದರು.

ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಗ್ರಾಮಾಭಿವೃದ್ಧಿಗೆ ಗ್ರಾಮಸ್ಥರೆಲ್ಲ ಕೈಜೋಡಿಸಿ ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕು. ಯುವಕರು ಮತ್ತು ಮಹಿಳಾ ಸಂಘಗಳು ಊರಿನ ಸ್ವಚ್ಛತೆ, ಸಾರ್ವಜನಿಕ ಸ್ಥಳಗಳ ಸಂರಕ್ಷಣೆಗೆ ಮುಂದಾಗಬೇಕು. ಒಗ್ಗಟ್ಟು ಕಾಪಾಡಿಕೊಂಡು ಇತರ ಗ್ರಾಮಗಳಿಗೂ ಮಾದರಿಯಾಗಬೇಕು. ಸಣ್ಣಪುಟ್ಟ ವ್ಯಾಜ್ಯಗಳನ್ನು ಮುಖಂಡರೇ ಬಗೆಹರಿಸಿ, ಕೋರ್ಟು, ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು. ಮುನಿಸ್ವಾಮಿ, ಸಂಸದ

ತಾಪಂ ಇಒ ಬಾಬು, ಪಿಡಿಒ ಸುನಿತಾ, ಬಿಜೆಪಿ ಮುಖಂಡರಾದ ಬಾಲಾಜಿ, ಕೆಂಬೋಡಿ ನಾರಾಯಣಸ್ವಾಮಿ, ಸುರೇಶ್​, ಮಂಜುನಾಥ್​, ಸೂರ್ಯನಾರಾಯಣ, ತಿಮ್ಮರಾಯಪ್ಪ, ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು.