ಜಿಲ್ಲೆ

ಮುಲಾಜಿಗೆ ಒಳಗಾಗದೆ ಜನಪರ ಕೆಲಸ ಮಾಡಲಿ

ಹಾನಗಲ್ಲ: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಜತೆಗೂಡಿ ಹೆಜ್ಜೆ ಹಾಕಿದರೆ ಪರಿಣಾಮಕಾರಿ ಆಡಳಿತ ನೀಡಬಹುದಾಗಿದೆ. ಹಾಗಾಗಿ ಯಾರ ಮುಲಾಜಿಗೂ ಒಳಗಾಗದೇ ಜನಪರ ಕೆಲಸ ಮಾಡುವಂತೆ ಸರ್ಕಾರಿ ನೌಕರರಿಗೆ ಶಾಸಕ ಶ್ರೀನಿವಾಸ ಮಾನೆ ಕಿವಿಮಾತು ಹೇಳಿದರು.

ಇಲ್ಲಿನ ಜಗಜೀವನರಾಂ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸಿಕೊಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈಗಾಗಲೇ 7ನೇ ವೇತನ ಆಯೋಗದ ಶಿಾರಸ್ಸು ಜಾರಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಾಗಿದೆ. ಸರ್ಕಾರಿ ನೌಕರರ ಎನ್‌ಪಿಎಸ್‌ಗೆ ಮುಕ್ತಿ ದೊರೆತು ಒಪಿಎಸ್ ಮಾಡುವ ಕಾಲ ಸನ್ನಿಹಿತವಾಗಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ರಾಜ್ಯದಲ್ಲಿ 5 ಲಕ್ಷ 12 ಸಾವಿರ ಸರ್ಕಾರಿ ನೌಕರರು 6.5 ಕೋಟಿ ಜನರಿಗೆ ಸರ್ಕಾರಿ ಸೇವೆ ಸಲ್ಲಿಸುವ ಅನಿವಾರ್ಯತೆಯಲ್ಲಿದ್ದೇವೆ. ಜನಸಂಖ್ಯೆ ಹೆಚ್ಚಿದೆ, ಆದರೆ ಅದಕ್ಕೆ ತಕ್ಕಂತೆ ನೌಕರರಿಲ್ಲ. ನಿವತ್ತರ ಕೆಲಸವೂ ಸೇರಿ ಇಬ್ಬರು ಮೂವರ ಕೆಲಸವನ್ನು ಒಬ್ಬೊಬ್ಬರೇ ತೀರ ಒತ್ತಡದಲ್ಲಿ ಮಾಡಬೇಕಾಗಿದೆ. ಶಿಕ್ಷಕರಂತೂ ಪಾಠದ ಜತೆಗೆ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು ಹೆಣಗಾಡುವಂತಾಗಿದೆ. ಆದರೂ ಸರ್ಕಾರ ನಮಗೆ ಸೌಲಭ್ಯ ಕೊಟ್ಟಿದೆ. 7 ನೇ ವೇತನ ಆಯೋಗದ ಒಂದು ತಿಂಗಳ ಹೆಚ್ಚುವರಿ ವೇತನವನ್ನು ಸರ್ಕಾರಿ ಶಾಲೆಗಳ ಅಭಿವದ್ಧಿಗೆ ಕೊಟ್ಟರೆ ಸಾರ್ಥಕ ಭಾವ ಮೂಡಲಿದೆ ಎಂದರು.

ಸಂಘದ ತಾಲೂಕಾಧ್ಯಕ್ಷ ಗುರುನಾಥ ಗವಾಣಿಕರ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರಾಯಗೋಳ, ಶಿಗ್ಗಾಂವಿ ತಾಲೂಕಾಧ್ಯಕ್ಷ ಅರುಣ ಹುಡೇದಗೌಡ್ರ, ರಾಣೆಬೆನ್ನೂರು ತಾಲೂಕಾಧ್ಯಕ್ಷ ಮಂಜುನಾಥ ಕೆಂಚರಡ್ಡಿ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ತಹಸೀಲ್ದಾರ್ ಎಸ್.ರೇಣುಕಾ, ಶಿಗ್ಗಾಂವಿ ಪ್ರಭಾರ ತಹಸೀಲ್ದಾರ್ ರವಿ ಕೊರವರ, ತಾಪಂ ಇಒ ಪರಶುರಾಮ ಪೂಜಾರ, ಗಂಗಾ ಹಿರೇಮಠ, ಸಿ.ಜಿ. ಪಾಟೀಲ, ಬಿ.ಎಸ್.ಚಲ್ಲಾಳ, ಎಂ.ಎಸ್.ಗುಂಡಪಲ್ಲಿ, ಅನಿತಾ ಕಿತ್ತೂರ, ವಿ.ಬಿ. ಚಿಕ್ಕೇರಿ, ಎಸ್.ಇ. ನರೇಗಲ್ಲ, ಡಿ.ಡಿ. ಲಂಗೋಟಿ, ಡಾ.ಕೆ.ಜಿ. ಲಿಂಗರಾಜ, ಎಸ್.ಎಸ್.ನಿಸ್ಸೀಮಗೌಡರ ಇದ್ದರು. ಭಾಲಚಂದ್ರ ಅಂಬಿಗೇರ, ಜಗದೀಶ ಮಡಿವಾಳರ ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ವೀರಪ್ಪ ಕರೆಗೊಂಡರ ಸ್ವಾಗತಿಸಿದರು. ಸಿದ್ದು ಗೌರಣ್ಣನವರ ನಿರೂಪಿಸಿದರು.