ಅಥಣಿ: ಪಟ್ಟಣದ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಅರ್ಬನ್ ಕೋ-ಆಪ್ ಬ್ಯಾಂಕ್ ಪ್ರಸ್ತುತ ಸಾಲಿನಲ್ಲಿ ೧.೬೦ ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಗೆಜ್ಜಿ ಹೇಳಿದರು.
ತಾಲೂಕಿನ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶತಮಾನೋತ್ಸವದ ಸಂಭ್ರಮದಲ್ಲಿರುವ ಬ್ಯಾಂಕ್ ೧೦೫.೯೪ ಕೋಟಿ ರೂ. ಠೇವಣಿ ಸಂಗ್ರಹಿಸುವ ಮೂಲಕ ಸಾಧನೆ ಮಾಡಿದೆ. ಈ ವರೆಗೆ ೧೨೫.೬೬ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ೭೪.೩೩ಕೋಟಿ ರೂ. ಸಾಲ ಹಾಗೂ ಮುಂಗಡ ವಿತರಿಸಿದೆ. ಬ್ಯಾಂಕ್ ೨.೪೭ ಕೋಟಿ ರೂ. ಶೇರು ಬಂಡವಾಳ, ೧೫.೧೧ ಕೋಟಿ ರೂ. ಕಾಯ್ದ ನಿಧಿ ಹೊಂದಿದೆ. ಸಾಲ ಪಡೆದವರು ಸ್ವ ಉದ್ಯೋಗ ಆರಂಭಿಸಿ, ಆರ್ಥಿಕ ಸದೃಢರಾಗಿದ್ದಾರೆ. ಕಳೆದ ಸಾಲಿಗಿಂತ ಈ ವರ್ಷ ಶೇ.೨೮ರಷ್ಟು ಲಾಭ ಹೆಚ್ಚಿಸಿಕೊಂಡಿದೆ. ಬ್ಯಾಂಕ್ ಸಿಬ್ಬಂದಿ ಅವಿರತ ಸೇವೆ, ಗ್ರಾಹಕರ ಪ್ರಾಮಾಣಿಕ ವ್ಯವಹಾರದಿಂದ ಬ್ಯಾಂಕ್ ಪ್ರಗತಿ ಸಾಧಿಸಿದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ರುದ್ರಯ್ಯ ಹಿರೇಮಠ, ನಿರ್ದೇಶಕರಾದ ಸಂಜಯ ತೆಲಸಂಗ, ಸಂತೋಷ ಸಾವಡಕರ, ಶ್ರೀಶೈಲ ಮೊಪಗಾರ, ಶಿವಯೋಗಿ ಮಂಗಸೂಳಿ, ನಿವೇದಿತಾ ತೆಲಸಂಗ, ವಿಜಯಮಾಲಾ ತೆಲಸಂಗ, ಶಿವಾನಂದ ಹುನ್ನೂರ, ಮಹೇಶ ಚುನಮುರಿ, ರಾಮು ಗಾಡಿವಡ್ಡರ, ದುಂಡಪ್ಪ ಬುರುಡ, ಸುಷ್ಮಾ ಇಟ್ನಾಳಮಠ ಇತರರಿದ್ದರು.