ಜಿಲ್ಲೆ

ಮುರುಘಾಮಠದ ಜಾನಪದ ಕಲಾಮೇಳ ಸುಸಂಪನ್ನ

ಚಿತ್ರದುರ್ಗ: ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಶನಿವಾರ ಜಾನಪದ ಕಲಾಮೇಳ ಅದ್ದೂರಿಯಾಗಿ ಜರುಗಿ, ಸುಸಂಪನ್ನಗೊಂಡಿತು.

ಜಯದೇವ ಶ್ರೀಗಳ ಪ್ರತಿಮೆಯನ್ನು ಪುಷ್ಪಾಲಂಕೃತ ಟ್ರಾೃಕ್ಟರ್‌ನಲ್ಲಿ, ಬೆಳ್ಳಿ ಪುತ್ಥಳಿಯನ್ನು ಬೆಳ್ಳಿ ವರ್ಣದ ಸಾರೋಟಿನಲ್ಲಿ ಕೂರಿಸುವ ವೇಳೆ ಮಠದ ಆವರಣದಲ್ಲಿ ನೆರೆದಿದ್ದವರೆಲ್ಲ ಹರ್ಷೋದ್ಗಾರ ಮೊಳಗಿಸಿದರು.

ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ, ಅಲ್ಲಮ ಪ್ರಭು ದೇವರು, ಬಸವಾದಿ ಶರಣರು ಸೇರಿ ಶೂನ್ಯಪೀಠ ಹಾಗೂ ಮುರುಘಾ ಪರಂಪರೆಯ ಮುರುಗಿ ಶಾಂತವೀರ ಶ್ರೀ ಸೇರಿ ಅನೇಕ ಪೀಠಾಧ್ಯಕ್ಷರ ಭಾವಚಿತ್ರಗಳು ಮೆರವಣಿಗೆಯಲ್ಲಿ ರಾರಾಜಿಸಿದವು. ಕಲಾಮೇಳಕ್ಕೆ ರಾಜ್ಯ ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಚಾಲನೆ ನೀಡಿದರು.

ಮುರುಘಾಮಠದ ಆವರಣದಿಂದ ಆರಂಭವಾದ ಭವ್ಯ ಮೆರವಣಿಗೆ ರಾಜಬೀದಿಗಳಾದ ಗಾಂಧಿ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮಾರ್ಗವಾಗಿ ಸಂಚರಿಸಿ, ಕೋಟೆಯ ದ್ವಾರ ಬಾಗಿಲವರೆಗೂ ಸೇರಿ ಒಟ್ಟು 3 ಕಿ.ಮೀ ಸಾಗಿತು. ಮಾರ್ಗ ಮಧ್ಯೆ ಶ್ರೀಮಠದ ಭಕ್ತರಿಗೆ ಮಜ್ಜಿಗೆ ವಿತರಿಸಲಾಯಿತು.

ನಾಸಿಕ್ ಡೋಲು, ಛತ್ರಿ-ಚಾಮರ, ಸೋಮನ ಕುಣಿತ, ಮಹಿಳಾ ತಮಟೆ, ಕತ್ತಿ-ಗುರಾಣಿ ಕುಣಿತ, ಹಾವೇರಿ ಜಿಲ್ಲೆಯ ಝಾಂಜ್ ಪಥಕ, ಉರುಮೆ, ಬ್ರಾಸ್ ಬ್ಯಾಂಡ್ ವಾದ್ಯ, ಕೀಲುಕುದುರೆ, ವೀರಗಾಸೆ ಮಕ್ಕಳ ಕುಣಿತ, ಭರ್ಚಿ ಕುಣಿತ, ಪುರುಷರ ಡೊಳ್ಳು, ಖಾಸ ಬೇಡರ ಪಡೆ, ಗಾರುಡಿ ಗೊಂಬೆ, ಲಂಬಾಣಿ ನೃತ್ಯ, ಡ್ರಂ ಸೆಟ್, ಭೂತನ ಕುಣಿತ, ಕೊಂಬು ಕಹಳೆ, ಟಕೂರಿ ವಾದ್ಯ, ನಂದಿಕೋಲು ಸಮಾಳ, ತ್ರಾಷ್, ಹಗಲು ವೇಷ, ಬ್ಯಾಂಜೋ, ಛತ್ರಿ ಕುಣಿತ, ಕರಡಿ ಚಮಾಳ, ಗೊರವರ ಕುಣಿತ, ಕೋಲಾಟ ಹೀಗೆ ಅನೇಕ ಕಲಾತಂಡದವರು ತಮ್ಮಲ್ಲಿನ ಕಲೆ ಪ್ರದರ್ಶಿಸುತ್ತ ನೋಡುಗರ ಗಮನ ಸೆಳೆದರು.

ವಿದ್ಯಾರ್ಥಿಗಳು ವಚನ ಪ್ರಸ್ತುತ ಪಡಿಸುತ್ತ ಮೆರವಣಿಗೆಯಲ್ಲಿ ಸಾಗಿದರು. ಕಲಾಮೇಳವೂ ಅನೇಕ ವಿಶೇಷಗಳಿಗೆ ಸಾಕ್ಷಿಯಾಯಿತು. ಮಾರ್ಗ ಮಧ್ಯೆ ಜನಪ್ರತಿನಿಧಿಗಳು, ಶ್ರೀಮಠದ ಸದ್ಭಕ್ತರು ಜಯದೇವ ಶ್ರೀ ಅವರಿಗೆ ಭಕ್ತಿ ಸಮರ್ಪಿಸಿದರು.

ಡಾ. ಬಸವಕುಮಾರ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಡಾ.ಬಸವಪ್ರಭು ಶ್ರೀ, ಗುರು ಮಹಾಂತ ಶ್ರೀ, ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, ಡಾ.ಬಸವ ರಮಾನಂದ ಶ್ರೀ, ಮಲ್ಲಿಕಾರ್ಜುನ ಶ್ರೀ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಎಸ್.ಎನ್.ಚಂದ್ರಶೇಖರ್, ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಹರಗುರು ಚರಮೂರ್ತಿಗಳು, ಎಸ್‌ಜೆಎಂ ವಿದ್ಯಾಪೀಠದ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು.