ಜಿಲ್ಲೆ

ಮುರಿದು ಬಿದ್ದ ಖಾಸಗಿ ಬಸ್ ಚಕ್ರ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟದ ಮಾರ್ಗಮಧ್ಯೆ ತಿರುವಿನಲ್ಲಿ ಬುಧವಾರ ಖಾಸಗಿ ಬಸ್ ಚಕ್ರ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಧ್ಯಾಹ್ನ 12ರ ವೇಳೆಯಲ್ಲಿ ಕೊಳ್ಳೇಗಾಲದಿಂದ ಮ.ಬೆಟ್ಟಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಭಕ್ತರಿದ್ದರು. ಈ ವೇಳೆ ತಾಳುಬೆಟ್ಟದ ಸಮೀಪವಿರುವ 5ನೇ ತಿರುವಿನಲ್ಲಿ ಬಸ್‌ನ ಮುಂಭಾಗದ ಬಲ ಭಾಗದಲ್ಲಿನ ಚಕ್ರದ ಆ್ಯಂಗ್ಲರ್ ತುಂಡಾಗಿ ಕಳಚಿ ಬಿದ್ದಿದೆ. ಸದ್ಯ ಚಾಲಕನ ಸಮಯ ಪ್ರಜ್ಞೆಯಿಂದ ಉಂಟಾಗುತ್ತಿದ್ದ ಅನಾಹುತ ತಪ್ಪಿದಂತಾಗಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಭಕ್ತರು ಮತ್ತೊಂದು ಬಸ್ಸಿನಲ್ಲಿ ಮ.ಬೆಟ್ಟಕ್ಕೆ ತೆರಳಿದರು.