ನಾಲತವಾಡ: ಸುಸಜ್ಜಿತವಾಗಿ ನಿರ್ಮಾಣಗೊಂಡ ಸಮೀಪದ ಘಾಳಪೂಜಿ ನೂತನ ಮುರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಲು ಶೀಘ್ರವೇ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಘಾಳಪೂಜಿ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದ ವೇಳೆ 22 ಕೋಟಿ ರೂ. ಅನುದಾನ ತಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಅರಣ್ಯ ಪ್ರದೇಶದ ಹಲವು ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿರ್ಮಾಣ ಕಾರ್ಯ ಕುಂಠಿತಗೊಂಡಿತ್ತು. ಸದ್ಯ ಶೇ. 95ರಷ್ಟು ಕಾಮಗಾರಿ ಮುಗಿದಿದೆ. ಹಲವು ವರ್ಷಗಳಿಂದ ಮಂಗಲ ಭವನದಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ. ಸದ್ಯ ನೂತನ ವಸತಿ ಶಾಲೆಯ ಉತ್ತಮ ವಾತಾವರಣದ ಮಧ್ಯೆ ಕಲಿಕೆ ಆರಂಭಗೊಳ್ಳಲಿದೆ ಎಂದರು.
ಉದ್ಘಾಟನೆಗೆ ಸಮಾಜಕಲ್ಯಾಣ ಇಲಾಖೆ ಸಚಿವರನ್ನು ಕರೆ ತರಲು ಚಿಂತಿಸಲಾಗಿದೆ. ಮುಖ್ಯ ಪ್ರವೇಶ ದ್ವಾರಕ್ಕೆ ಮೆಟಲ್ ನಾಮಫಲಕ ಅಳವಡಿಸಲು ಸೂಚಿಸಲಾಗಿದೆ ಎಂದರು.
ಬಸವೇಶ್ವರ ಪ್ರೌಢ ಶಾಲೆಯ ಕಾರ್ಯದರ್ಶಿ ಡಾ. ಬಲವಂತ ಉಣ್ಣಿಬಾವಿ, ಹನಮಂತ ಕುರಿ, ಮಲ್ಲಿಕಾರ್ಜುನ ಬಾಗೇವಾಡಿ, ನಾಗರಾಜ ತಂಗಡಗಿ, ಪ್ರಾಚಾರ್ಯ ಬಿ.ಎಂ. ವಡಜೆ, ಸಂಗಮೇಶ ರಡ್ಡೇರ, ಪಿ.ಬಿ. ಕಮರಿ, ಶಿಕ್ಷಕರಾದ ಜಿವಣಗಿಮಠ, ಬಾಲಚಂದ್ರ ಮೇಟಿ, ನಿಲಯ ಪಾಲಕ ಶಿವಲಿಂಗ ಕಾಂಬ್ಳೆ ಇದ್ದರು.