ಜಿಲ್ಲೆ

ಮುನ್ನೆಚ್ಚರಿಕೆಯೊಂದಿಗೆ ಶಾಲೆ ಪುನರಾರಂಭಿಸಿ : ಸರ್ಕಾರಕ್ಕೆ ಎಚ್.ಡಿ. ಕುಮಾರಸ್ವಾಮಿ ಕಿವಿಮಾತು

ರಾಮನಗರ: ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಶಾಲಾ-ಕಾಲೇಜುಗಳನ್ನು ಪುನರಾರಂಭಿಸಬೇಕು. ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ರಾಮನಗರಕ್ಕೆ ಭಾನುವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ವೇಳೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ವಾರ ರಾಜ್ಯದ ವಿವಿಧೆಡೆಗಳಲ್ಲಿ ಭುಗಿಲೆದ್ದಿದ್ದ ವಿವಾದ ಮರುಕಳಿಸದಂತೆ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳು ಎಚ್ಚರವಹಿಸಬೇಕು ಎಂದರು.

ಕೆರೆಗೆ ನೀರು ತುಂಬಿಸುವಾಗ ರಾಜಕೀಯ: ಮಾಕಳಿ ಏತ ನೀರಾವರಿಯು 28 ಕೋಟಿ ರೂ.ವೆಚ್ಚದ ಯೋಜನೆಯಾಗಿದೆ. ಇದು ಸಣ್ಣ ನೀರಾವರಿ ಇಲಾಖೆಯ ಯೋಜನೆ. ನಾನು ಸಿಎಂ ಆಗಿದ್ದಾಗ ಈ ಯೋಜನೆಯ ಅನುಷ್ಠಾನಕ್ಕೆ ತೀರ್ಮಾನಿಸಿದ್ದೆ. ಯೋಜನೆಗೆ ಭೂಮಿಪೂಜೆ ನೆರವೇರಿಸಿದಾಗ ಸೊಲ್ಲೆತ್ತದ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಈಗ ಇದು 15 ಕೋಟಿ ರೂ. ವೆಚ್ಚದ ಯೋಜನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಕೆರೆಗೆ ನೀರು ತುಂಬಿಸುವ ವೇಳೆ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಎಚ್‌ಡಿಕೆ ಆರೋಪಿಸಿದರು.

ಚುನಾವಣೆಗೆ ನಿಲ್ಲುವುದಿಲ್ಲ: ಇತ್ತೀಚೆಗೆ ತಾವು ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುತ್ತೇನೆ... ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂದು ಹೇಳಿದ್ದರ ಅರ್ಥ ನಾನೇ ಸ್ಪರ್ಧಿಸುತ್ತೇನೆ ಎಂದು ಅಲ್ಲ. ಅಲ್ಲಿ ಚುನಾವಣೆ ನಡೆಸಲು ಬರುತ್ತೇನೆ ಎಂದಷ್ಟೇ ಅರ್ಥ. ಹತ್ತು ದಿನ ಕ್ಷೇತ್ರದಾದ್ಯಂತ ಓಡಾಡಿ, ಚುನಾವಣೆ ಕೆಲಸ ಮಾಡುತ್ತೇನೆ ಎಂಬುದಷ್ಟೇ ಅರ್ಥ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದ ಬಳಿಕ ರಾಮನಗರ ಪ್ರವಾಸ: ರಾಮನಗರದಲ್ಲಿ ಕಾಂಗ್ರೆಸ್‌ಗೆ ಬೇರೂರಲು ಸಾಧ್ಯವೇ ಇಲ್ಲ. 24ರಂದು ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಪ್ರತಿ ಹಳ್ಳಿಗಳಿಗೂ ಭೇಟಿ ನೀಡುತ್ತೇನೆ. ಸ್ಥಳೀಯ ಮಟ್ಟದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಇರುತ್ತವೆ. ಖುದ್ದಾಗಿ ಜನರ ಬಳಿ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸುವೆ. ನಾವೇನು ತಪ್ಪು ಮಾಡಿದ್ದೇವಾ? ಜನಕ್ಕೆ ಏನು ಸಮಸ್ಯೆ ಇದೆ ಎಂಬುದನ್ನು ಕೇಳಿ ತಿಳಿದು, ಅವನ್ನು ಪರಿಹರಿಸುತ್ತೇನೆ ಎಂದು ಮಾಜಿ ಸಿಎಂ ಹೇಳಿದರು.

ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ ಮಗುವಿನ ಸಂಬಂಧ ಇದೆ. ಮಗು ಬೆಳೆಸಿದ ತಾಯಿಯೇ ಮಗುವಿನ ರಕ್ಷಣೆ ಮಾಡುತ್ತಾಳೆ. ಯಾವುದೇ ಕಾರಣಕ್ಕೂ ಮಗುವಿಗೆ ತೊಂದರೆಯಾಗಲು ಬಿಡಲ್ಲ ಎಂಬ ಅಚಲ ನಂಬಿಕೆ ನನಗೆ ಇದೆ. ಹಾಗಾಗಿ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಶೀಘ್ರದಲ್ಲಿ ತೀರ್ಮಾನಿಸಿ ತಿಳಿಸುವೆ ಎಂದರು.

ನಿಖಿಲ್ ಸ್ಪರ್ಧೆ ಕಾರ್ಯಕರ್ತರ ತೀರ್ಮಾನ: ನಿಖಿಲ್ ಕುಮಾರಸ್ವಾಮಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ತೀರ್ಮಾನಿಸುತ್ತಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಚಿಕ್ಕಮಗಳೂರಿನಲ್ಲಿ ಆಡಿದ ಆಟ ಇಲ್ಲಿ ಆಡಬೇಡಿ, ಎಸ್‌ಪಿಗೆ ಎಚ್ಡಿಕೆ ತರಾಟೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡುವುದಾಗಿ ಎಸ್‌ಪಿ ಸಂತೋಷ್ ಬಾಬು ನೀಡಿರುವ ಹೇಳಿಕೆ ಖಂಡಿಸಿದ ಎಚ್.ಡಿ.ಕುಮಾರಸ್ವಾಮಿ, 500 ಮದ್ಯದ ಬಾಟಲಿಗಳೊಂದಿಗೆ ಸಿಕ್ಕಿಬಿದ್ದವರನ್ನು ನಿಮ್ಮ ಇಲಾಖೆಯವರೇ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡುತ್ತಾರೆ. ದುಡಿದು ಹೈರಾಣಾಗಿರುವ ರೈತರು ಕುಡಿಯಲೆಂದು ಹೊಲಗಳಲ್ಲಿ 20 ಬಾಟಲಿಗಳನ್ನು ಇಟ್ಟುಕೊಂಡಿದ್ದರೆ ಅವರನ್ನು ಜೈಲಿಗೆ ಕಳಿಸುತ್ತೀರಾ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರಿನಲ್ಲಿ ಆಡಿದ ಆಟವನ್ನು ಇಲ್ಲಿ ಆಡಬೇಡಿ. ಪಕ್ಷಾತೀತವಾಗಿ ಕೆಲಸ ಮಾಡಲು ಮುಂದಾಗಿ ಎಂದು ಎಚ್ಚರಿಕೆ ನೀಡಿದರು. ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತ ಪ್ರಸನ್ನ ಎಂಬಾತ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಎಂದು ಆರೋಪಿಸಿ, ರಾಮನಗರ ಪೊಲೀಸರು ಆತನನ್ನು ಶನಿವಾರ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಸ್‌ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.