ಜಿಲ್ಲೆ

ಮುನಿಸು ಮರೆತು ಒಂದಾದ 33 ಜೋಡಿ

ಮೈಸೂರು: ಕೌಟುಂಬಿಕ ಕಲಹದಿಂದ ಬೇರ್ಪಟ್ಟು ವರ್ಷಾನುಗಟ್ಟಲೆ ಒಬ್ಬರಿಗೊಬ್ಬರು ಮುಖವನ್ನೇ ನೋಡದವರು ಅದಾಲತ್‌ನಲ್ಲಿ ಮುಖಾಮುಖಿಯಾಗಿ ಜೀವನದಲ್ಲಿ ಒಟ್ಟಿಗೆ ಸಾಗುವ ಮನಸ್ಸು ಮಾಡಿದರು…!
ವಿಚ್ಛೇದನ ಕೋರಿದ್ದ ದಂಪತಿಗಳು ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪರಸ್ಪರ ಸಿಹಿ ತಿನ್ನಿಸಿ ಮತ್ತೆ ಜತೆಯಾದರು.
ಮಗುವಿಗೆ ಸ್ನಾನ ಮಾಡಿಸದಿರುವ ಕಾರಣಕ್ಕೆ ಉಂಟಾದ ಮನಸ್ತಾಪ ದೊಡ್ಡದಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ ಸುಖಾಂತ್ಯ ಕಂಡಿತು. ಹೀಗೆ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಜಗಳ, ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಸಂಸಾರ ಬಂಧನದಿಂದ ದೂರವಾಗಲು ಮುಂದಾಗಿದ್ದ 33 ಜೋಡಿ ಮುನಿಸು ಮರೆತು ಒಂದಾದರು.
ಮಗುವಿಗೆ ಏಕೆ ಸ್ನಾನ ಮಾಡಿಸಿಲ್ಲ ಎಂದು ಗಂಡ ಪತ್ನಿಯನ್ನು ಕೇಳಿದ್ದೇ ತಪ್ಪಾಯ್ತು. ಇಷ್ಟಕ್ಕೇ ಹೆಂಡತಿ ಮುನಿಸಿಕೊಂಡು ವಿಚ್ಛೇದನಕ್ಕೆ ನೋಟಿಸ್ ಕಳುಹಿಸಿದ್ದಳು. ಇದರಿಂದ ಆರು ತಿಂಗಳು ದೂರವಾಗಿದ್ದ ದಂಪತಿ ಮಗುವಿನ ಭವಿಷ್ಯದ ದೃಷ್ಟಿಯಿಂದ ಮತ್ತೆ ಒಂದಾದರು. ಮತ್ತೊಂದು ಪ್ರಕರಣದಲ್ಲಿ ಇಬ್ಬರೂ ಇಂಜಿನಿಯರ್‌ಗಳಾಗಿರುವ ಜೋಡಿ ಕೆಲಸದ ಕಾರಣಕ್ಕೆ ದೂರವಾಗಲು ಬಯಸಿದ್ದರು. ಒಬ್ಬರು ಮೈಸೂರಿನಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ. ಮೈಸೂರು ಬಿಟ್ಟು ಹೋಗಲು ಪತ್ನಿಗೆ ಇಷ್ಟವಿಲ್ಲ, ಬೆಂಗಳೂರಿನಿಂದ ಬರಲು ಪತಿಗೆ ಆಗುತ್ತಿರಲಿಲ್ಲ. ಹೀಗಾಗಿ ವಿಷಯ ಮುನಿಸಿನವರೆಗೂ ಹೋಗಿ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿತ್ತು.

ಜವಾಬ್ದಾರಿ ಅರಿತು ಸಂಸಾರ ನಡೆಸಿ:
ಅದಾಲತ್‌ನಲ್ಲಿ ಒಂದಾದ ಜೋಡಿಗಳಿಗೆ ಶುಭ ಹಾರೈಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಅದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಅವರು, ಗಂಡ-ಹೆಂಡತಿ ತಿಳಿವಳಿಕೆಯಿಂದ, ಜವಾಬ್ದಾರಿ ಅರಿತು ಸಮಾಜಮುಖಿಯಾಗಿ ಸಂಸಾರ ನಡೆಸಬೇಕು. ಜಗಳ, ಕೋಪ, ಮನಸ್ತಾಪಕ್ಕೆ ಜಾಗ ನೀಡದೆ ಹೊಂದಾಣಿಕೆಯಿಂದ ನಡೆದರೆ ಸಂತಸದಿಂದ ಜೀವನ ನಡೆಸಬಹುದು ಎಂದು ಹೇಳಿದರು.
ಸಣ್ಣಪುಟ್ಟ ಕಾರಣಕ್ಕೆ ಗಂಡ-ಹೆಂಡತಿ ದೂರವಾಗಿ ಸಂಸಾರ ಒಡೆದು ಚೂರಾಗಿತ್ತು. ಕುಳಿತು ಮಾತನಾಡಿದರೆ ಸಾಕಷ್ಟು ಸಮಸ್ಯೆಗಳು ಬಗೆಹರಿಲಿವೆ. ಆದರೆ ಕೋಪದಲ್ಲಿ ತಾಳ್ಮೆ ಕಳೆದಕೊಂಡು ವರ್ತಿಸಿದರೆ ಯಾವುದೂ ಸರಿಯಾಗುವುದಿಲ್ಲ. ಇಂದು ಅವರನ್ನು ಒಟ್ಟುಗೂಡಿಸಿದ್ದು, ಗಂಡ-ಹೆಂಡತಿ ಜವಾಬ್ದಾರಿ ಅರಿತು ಸಂಸಾರ ನಡೆಸಬೇಕು. ಒಂದು ಕುಟುಂಬ ಉಳಿಸುವ ಒಳ್ಳೆಯ ಕಾರ್ಯವನ್ನು ನ್ಯಾಯಾಧೀಶರು, ವಕೀಲರು ಮಾಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಈ ಬಾರಿಯ ಲೋಕ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿ ಮೊದಲ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದ ಹೆಚ್ಚು ಚಟುವಟಿಕೆಯಿಂದ ತೊಡಗಿಸಿಕೊಳ್ಳಲಾಗಿತ್ತು. ಅದಾಲತ್‌ನಲ್ಲಿ 87 ಕೌಟುಂಬಿಕ ಪ್ರಕರಣಗಳು ಬಗೆಹರಿದಿದ್ದು, 33 ಜೋಡಿ ವಿಚ್ಛೇದನದ ನಿರ್ಧಾರ ಬದಲಿಸಿ ಒಂದಾಗಿದ್ದಾರೆ. ಜಿಲ್ಲೆಯಾದ್ಯಂತ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಪ್ರಿ-ಲಿಟಿಗೇಷನ್ ಪ್ರಕರಣಗಳನ್ನೂ ಹೆಚ್ಚು ಬಗೆಹರಿಸಲಾಗುವುದು ಎಂದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ವೇಲಾ ಡಿ. ಖೊಡೆ, ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾ, ಗಿರೀಶ್ ಭಟ್, ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್ ಇದ್ದರು.