ಚಿತ್ರದುರ್ಗ: ಬೆಂಗಳೂರು ಆರ್.ಆರ್.ನಗರ ಶಾಸಕ ಮುನಿರತ್ನ ಬಿಬಿಎಂಪಿ ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಸಂದರ್ಭ ಜಾತಿಯನ್ನು ಅತ್ಯಂತ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಛಲವಾದಿ ಸಮುದಾಯದವರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಸಮುದಾಯದವರು, ಮುನಿರತ್ನ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಲಂಚದ ವಿಚಾರವಾಗಿ ಗುತ್ತಿಗೆದಾರರನ್ನು ಮನೆಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ಮುನಿರತ್ನ ನಿಂದಿಸಿದ್ದಾರೆ. ಈ ವೇಳೆ ಛಲವಾದಿ ಹಾಗೂ ಒಕ್ಕಲಿಗ ಸಮುದಾಯ ಮತ್ತು ಮಹಿಳೆಯರ ಕುರಿತು ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದೂರಿದರು.
ಜವಾಬ್ದಾರಿಯಿಂದ ನಡೆದುಕೊಳ್ಳುವ ಬದಲು ಶಾಸಕ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಕೂಡಲೇ ಶಾಶ್ವತವಾಗಿ ಚುನಾವಣೆಗೆ ನಿಲ್ಲದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ, ಸಮುದಾಯದ ಮುಖಂಡರಾದ ದಯಾನಂದ್, ಚಿದಾನಂದಮೂರ್ತಿ, ಎಸ್.ಎನ್.ರವಿಕುಮಾರ್, ಅಣ್ಣಪ್ಪಸ್ವಾಮಿ, ಓಂಕಾರಮೂರ್ತಿ, ಚಂದ್ರಣ್ಣ, ಜಗ್ಗಣ್ಣ, ತಿಪ್ಪೇಸ್ವಾಮಿ, ಶಶಾಂಕ, ಪ್ರಸಾದ್, ನಾಗರಾಜ್, ಸುಹಾಸ್ ಇತರರಿದ್ದರು.