ಜಿಲ್ಲೆ

ಮುನಗನಹಳ್ಳಿ ಗ್ರಾಪಂಗೆ ರಾಷ್ಟ್ರೀಯ ಮಕ್ಕಳ ಸ್ನೇಹಿ ಪ್ರಶಸ್ತಿ ಗರಿ

ಚಿಕ್ಕಬಳ್ಳಾಪುರ/ಚಿಂತಾಮಣಿ : ಶಾಲಾ ಮತ್ತು ಅಂಗನವಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಚಿಂತಾಮಣಿ ತಾಲೂಕಿನ ಮುನಗನಹಳ್ಳಿ ಗ್ರಾಮ ಪಂಚಾಯಿತಿ 2019-2020ನೇ ಸಾಲಿನ ರಾಷ್ಟ್ರೀಯ ಮಕ್ಕಳ ಸ್ನೇಹಿ ಪ್ರಶಸ್ತಿಗೆ ಭಾಜನವಾಗಿದೆ.

ಪಂಚಾಯತ್ ರಾಜ್ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಡಿಯೋ ಸಂವಾದದಲ್ಲಿ ಗ್ರಾಪಂಗೆ 5 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಘೋಷಿಸಿದ್ದು, ಶನಿವಾರ ಜಿಪಂ ಸಿಇಒ ಪಿ.ಶಿವಶಂಕರ್ ಗ್ರಾಪಂ ಅಧ್ಯಕ್ಷ ರಮೇಶ್ ಮತ್ತು ಪಿಡಿಒ ಎನ್.ಕವಿತಾಗೆ ಹಸ್ತಾಂತರಿಸಿದರು.

ಗ್ರಾಮೀಣ ಭಾಗದ ಜನರಿಗೆ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸುವುದರ ಜತೆಗೆ ಉತ್ತಮ ಸಾಧನೆಯ ಮೂಲಕ ಗ್ರಾಪಂಗಳು ಗಮನ ಸೆಳೆಯಬೇಕು. ಜಿಲ್ಲೆಯಲ್ಲಿ 157 ಗ್ರಾಪಂಗಳಿದ್ದು ಪರಸ್ಪರ ಆರೋಗ್ಯಕರ ಪೈಪೋಟಿಯಲ್ಲಿ ಕಾರ್ಯನಿರ್ವಹಿಸಿ, ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಬೇಕು ಎಂದರು.

ಮುಗನಹಳ್ಳಿ ಗ್ರಾಪಂ ವಿವಿಧ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಆದ್ಯತೆ ನೀಡಿದ್ದು ವಿಶೇಷವಾಗಿ ಮಕ್ಕಳು ಮತ್ತು ಮಹಿಳಾಪರ ಕಾರ್ಯಕ್ರಮಗಳನ್ನು ಕೈಗೊಂಡು ಪ್ರಶಸ್ತಿ ಪಡೆದಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಜಿಪಂ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್ ಮತ್ತಿತರರು ಇದ್ದರು.