ಮುದ್ದೇಬಿಹಾಳ: ಆರ್‌ಓ ಪದ್ಧತಿಯಲ್ಲಿ ಶುದ್ಧೀಕರಣಗೊಂಡ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಅನುಕೂಲ ಇದೆ. ವಯಸ್ಸಾದವರಲ್ಲಿ ಕಾಡುವ ಕೈ, ಕಾಲು, ಮಾಂಸಖಂಡಗಳ ನೋವಿನ ಸಮಸ್ಯೆಗಳು ಬಹುತೇಕ ಕಡಿಮೆ ಆಗುತ್ತದೆ. ಪ್ರತಿಯೊಬ್ಬರೂ ಶುದ್ಧೀಕರಣ ಮಾಡಿದ ನೀರನ್ನೇ ಬಳಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ 18ನೇ ವಾರ್ಡ್‌ನಲ್ಲಿರುವ ಮೂಲ ದ್ಯಾಮವ್ವನ ಗುಡಿಯ ಹತ್ತಿರದ ಅವಟಿ ಗಲ್ಲಿಯಲ್ಲಿ ಪುರಸಭೆಯಿಂದ 15ನೇ ಹಣಕಾಸು ಯೋಜನೆಯಡಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶುದ್ಧೀಕರಿಸಿದ ನೀರು ಅತ್ಯಮೂಲ್ಯವಾಗಿದ್ದು, ಸದ್ಬಳಕೆ ಮಾಡುವ ಜವಾಬ್ದಾರಿ ನಾಗರಿಕರದ್ದಾಗಿದೆ. ಈ ನೀರನ್ನು ಸ್ನಾನ ಸೇರಿ ಇತ್ಯಾದಿ ನಿತ್ಯದ ಚಟುವಟಿಕೆಗಳಿಗೆ ಬಳಸಬಾರದು. ಅಡುಗೆ ಮಾಡಲು ಬಳಸಿದರೆ ಅಡುಗೆಗೆ ರುಚಿ ಬರುತ್ತದೆ. ಇದನ್ನು ಬಡಾವಣೆಯ ಎಲ್ಲರಿಗೂ ತಿಳಿಹೇಳಿ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ಈ ಘಟಕ ನಿರ್ಮಾಣಕ್ಕಾಗಿ ಈ ವಾರ್ಡ್‌ನ ಸದಸ್ಯೆ ಶಾಜಾದಬಿ ಹುಣಚಗಿ ಹೆಚ್ಚಿನ ಪ್ರಯತ್ನ ಮಾಡಿದ್ದಾರೆ ಎಂದರು.
ಪುರಸಭೆ ಸದಸ್ಯರಾದ ಶಾಜಾದಬಿ ಹುಣಚಗಿ, ಮಹಿಬೂಬ ಗೊಳಸಂಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಬಡಾವಣೆಯ ಪ್ರಮುಖರಾದ ಬಾಷಾಸಾಬ ಅವಟಿ, ಹುಸೇನಸಾಬ ಬಾವೂರ, ವಕೀಲ ಎನ್.ಬಿ.ಮುದ್ನಾಳ, ಬಾಬು ಮೊಕಾಶಿ, ಬಬ್ಲೂ ಹುಣಚಗಿ, ದಾದುಸಾಬ ತಮದಡ್ಡಿ, ಹಬೀಬ ಹಡಗಲಿ, ಮಹ್ಮದರಫೀಕ ವಾಲಿಕಾರ, ಇಸ್ಮಾಯಿಲ್ ಅವಟಿ, ಯುನೂಸ್ ಅವಟಿ, ಅಕ್ರಮ್ ಮೊಕಾಶಿ, ಯ್ಯೂಮ್ ನಾಯ್ಕೋಡಿ ಇತರರಿದ್ದರು.
ಇದೇ ವೇಳೆ ಅವಟಿ ಗಲ್ಲಿ, ರಿಸಾಲ್ದಾರ್ ಗಲ್ಲಿ ಸೇರಿ ಸುತ್ತಲಿನ ಬಡಾವಣೆಗಳ ಮಹಿಳೆಯರು ಶಾಸಕರನ್ನು ಭೇಟಿ ಮಾಡಿ ತಮಗೆ ಶೌಚಗೃಹ ಅವಶ್ಯಕತೆ ಕುರಿತು ಮನವರಿಕೆ ಮಾಡಿಕೊಟ್ಟರು. ಅಹವಾಲು ಆಲಿಸಿದ ಶಾಸಕರು ಪುರಸಭೆಯಲ್ಲಿ ಅನುದಾನ ಲಭ್ಯವಿದ್ದರೆ ಆ ಅನುದಾನದಲ್ಲಿ ಅಥವಾ ಶಾಸಕರ ನಿಧಿಯಲ್ಲಿ ಪುರುಷ- ಮಹಿಳೆಯರಿಗಾಗಿ ತಲಾ 10 ಜನರಿಗೆ ಪ್ರತ್ಯೇಕವಾಗಿ ಬಳಕೆ ಆಗುವಂತೆ ಹೈಟೆಕ್ ಶೌಚಗೃಹ ನಿರ್ಮಿಸಲು ಯೋಜನೆ ತಯಾರಿಸುವಂತೆ ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.