ಮುದ್ದೇಬಿಹಾಳ: ಕಳೆದ 6 ತಿಂಗಳಿಂದ ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿದ್ದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಪುನರಾರಂಭಗೊಂಡಿದ್ದು ಸೋಮವಾರ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.
ಡಿಸಿಡಿಸಿ ಹೆಲ್ತ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ವಿಜಯಪುರ ಜಿಲ್ಲಾ ಸಂಯೋಜಕ ಸಂತೋಷ ಮದಳೆ ಮಾತನಾಡಿ, ಎನ್‌ಜಿಒ ಕೆಲಸ ನಿಲ್ಲಿಸಿದ್ದರಿಂದ ಡಯಾಲಿಸಿಸ್ ಸ್ಥಗಿತಗೊಂಡು ರೋಗಿಗಳಿಗೆ ತುಂಬಾ ತೊಂದರೆಯಾಗಿತ್ತು. ಈಚೆಗೆ ಸರ್ಕಾರ ಟೆಂಡರ್ ಕರೆದಾಗ ಡಿಸಿಡಿಸಿ ಹೆಲ್ತ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ಗೆ ಅವಕಾಶ ಸಿಕ್ಕಿದೆ. ಟೆಂಡರ್ ಪಡೆದ ನಂತರ ಇದೀಗ ಬೆಳಗಾವಿ ವಿಭಾಗದಲ್ಲಿಯೇ ಪ್ರಥಮವಾಗಿ ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಪುನರಾರಂಭಿಸಲಾಗಿದೆ. ಅಗತ್ಯ ಇರುವ ರೋಗಿಗಳು ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಪುರಸಭೆಯ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ ಮಾತನಾಡಿ, 6 ತಿಂಗಳಿಂದ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಸ್ಥಗಿತಗೊಂಡ ಕಾರಣ ರೋಗಿಗಳು ಬಾಗಲಕೋಟೆ, ವಿಜಯಪುರ ಮುಂತಾದೆಡೆ ತೆರಳಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಅನಿವಾರ್ಯತೆ ಇತ್ತು. ಇದು ಬಡವರಿಗೆ ಆರ್ಥಿಕ ಮತ್ತು ಸಮಯದ ಹೂರೆ ಆಗಿತ್ತು. ಹಿರಿಯ ನಾಗರಿಕರಿಗೆ ಪ್ರಯಾಣಕ್ಕೂ ಭಾರೀ ಸಮಸ್ಯೆ ಆಗಿತ್ತು.
ಇದರ ಕುರಿತು ಮಾದಿನಾಳದ ರವೀಂದ್ರ ಬಿರಾದಾರ ಮತ್ತಿತರರ ಹೊರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ದೇಬಿಹಾಳಕ್ಕೆ ಬಂದ ಸಂದರ್ಭ ಡಯಾಲಿಸಿಸ್ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿ ಜನತಾ ದರ್ಶನದಲ್ಲೂ ಡಯಾಲಿಸಿಸ್ ಪುನರಾರಂಭಕ್ಕೆ ಅಹವಾಲು ಸಲ್ಲಿಸಲಾಗಿತ್ತು. ಸದ್ಯ ಈ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳು ಕಾರ್ಯಾರಂಭವಾಗಿವೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡರಿಗೆ ನಾಗರಿಕರ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಇದೇ ವೇಳೆ ಇಬ್ಬರು ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಪ್ರಾರಂಭಿಸಲಾಯಿತು. ಡಯಾಲಿಸಿಸ್ ನರ್ಸಿಂಗ್ ಅಧಿಕಾರಿ ಮಾಲಾಶ್ರೀ ತೋಟದ, ನವೀನ ಹೆಬ್ಬಾಳ, ಆಸ್ಪತ್ರೆಯ ಹಿರಿಯ ನರ್ಸಿಂಗ್ ಅಧಿಕಾರಿಗಳಾದ ಸಂಜಯ ಭೋಸಲೆ, ಮಹಮ್ಮದ್‌ರಫಿಕ್ ಬಾಗವಾನ, ಶರಣಪ್ಪ ನಾಟಿಕಾರ ಇತರರಿದ್ದರು.