ತುಮಕೂರು: ಹಾಲಿ ಸದಸ್ಯನಾಗಿದ್ದರೂ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಕಾಂಗ್ರೆಸ್ ಜತೆ ಮುನಿಸಿಕೊಂಡಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ಗೆ ಗುಡ್ಬೈ ಹೇಳುವುದು ಬಹುತೇಕ ಖಚಿತವಾಗಿದೆ.
ಜಿಲ್ಲೆಯ ಪ್ರಭಾವಿ ಒಕ್ಕಲಿಗ ಮುಖಂಡರಾಗಿರುವ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಇದ್ದ ಕಡೆಯ ಅವಕಾಶವನ್ನು ಕಾಂಗ್ರೆಸ್ ಬಳಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಗರಂ ಆಗಿರುವ ಅವರು ಕುಣಿಗಲ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಖಚಿತ ಎಂದು ಪುನರುಚ್ಚರಿಸಿದ್ದಾರೆ.
ರಾಜ್ಯಸಭೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತಾಲೂಕಿನ ಹೆಬ್ಬೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೈಕಮಾಂಡ್ಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಶಕ್ತಿ ಇಲ್ಲ. ಹಾಗಾಗಿ, ನಾನು ಪರ್ಯಾಯ ಯೋಜನೆಯತ್ತ ಗಮನಹರಿಸಿದ್ದೇನೆ ಎಂದರು.
ಸ್ಥಳಿಯರನ್ನು ಕಡೆಗಣಿಸಿ ಚುನಾವಣೆಯಲ್ಲಿ ಎಂದೂ ಗೆಲ್ಲದ ಸ್ವಯಂ ೂಷಿತ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಡುತ್ತಿರುವಾಗ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ನಮಗೇಕೆ ಅವಕಾಶ ನಿರಾಕರಿಸಲಾಗಿದೆ? ಕನಿಷ್ಠ ಕಾರಣವನ್ನಾದರೂ ಹೇಳಬೇಕಲ್ವಾ? ಎಂದು ಪ್ರಶ್ನಿಸಿದರು.
ಸಂಸತ್ ಚುನಾವಣೆಯಲ್ಲಿ ರಾಜ್ಯದ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಈಗ ಬೆಂಗಳೂರಿನಲ್ಲಿಯೇ ಇದ್ದಾರೆ. ಆಗ ನನಗೆ ಏನು ಭರವಸೆ ನೀಡಿದ್ದರು? ಅದರಂತೆ ಏಕೆ ನಡೆದುಕೊಳ್ಳಲಿಲ್ಲ? ಎಂಬುದನ್ನು ಅವರೇ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರೇ ನನ್ನ ವಿರುದ್ಧ ನಡೆಸಿದ್ದ ಷಡ್ಯಂತ್ರದ ಬಗ್ಗೆ ಇತ್ತೀಚಿಗೆ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಪ್ರಸ್ತಾಪಿಸಿದ್ದರು, ಈ ಬಗ್ಗೆಯೂ ಕಾಂಗ್ರೆಸ್ ಮೌನವಾಗಿರುವುದು ಜನರಿಗೆ ಎಲ್ಲವನ್ನೂ ಆರ್ಥ ಮಾಡಿಸಿದೆ ಎಂದರು.
ನಾನು ಕುಣಿಗಲ್ ಕ್ಷೇತ್ರದಿಂದ ಪಕ್ಷೇತರನಾಗಿಯಾದರೂ ಸರಿ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ಜನರು ಕೊಡುವ ತೀರ್ಪು ಸ್ವೀಕರಿಸಿ ಅದರಂತೆ ಕೆಲಸ ಮಾಡುತ್ತೇನೆ ಎಂದು ೂಷಿಸಿದರು.
ಚಿತಾವಣೆ ಮಾಡಿ ನನಗೆ ಟಿಕೆಟ್ ತಪ್ಪಿಸಿರಬಹುದು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ತಾಲೂಕಿನ ಜನ ಸ್ಪರ್ಧಿಸಬೇಕು ಎಂದು ಬಯಸಿದ್ದಾರೆ, ಯಾವ ಪಕ್ಷ ಎಂಬುದನ್ನು ಅವರನ್ನೇ ಕೇಳಿ ನಿರ್ಧರಿಸುತ್ತೇನೆ. > ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ