ಜಿಲ್ಲೆ

ಮುದ್ದಣ್ಣ ಶರಣರ 12 ವಚನಗಳು ಲಭ್ಯ

ಕೊಳ್ಳೇಗಾಲ: ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಪ್ರಸ್ತಾಪಿಸಿರುವ ಮುದ್ದಣ್ಣ ಶರಣರ 12 ವಚನಗಳು ಮಾತ್ರ ಲಭ್ಯವಿದ್ದು, ಆ ವಚನಗಳಲ್ಲಿ ವಿಚಾರದ ಬೆಳಕಿದೆ. ರೈತರಿಗೆ ಸಲಹೆಯಿದೆ. ಸಮಾಜಕ್ಕೆ ಉಪಯೋಗವಾಗಬಲ್ಲ ವಿವೇಚನೆ ಮತ್ತು ವಿಶ್ಲೇಷಣೆ ಇದೆ ಎಂದು ತೇರಂಬಳ್ಳಿ ದಾಸೋಹ ಮಠದ ಶ್ರೀ ಲಿಂಗರಾಜ ಸ್ವಾಮೀಜಿ ತಿಳಿಸಿದರು.

ತಾಲೂಕಿನ ತೇರಂಬಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಜೆಎಸ್‌ಬಿ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಒಕ್ಕಲಿಗ ಮುದ್ದಣ್ಣ ಜಯಂತಿ ಮತ್ತು ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತ ವೇದ ಶಾಸ್ತ್ರ ವನೋದುವುದಕ್ಕೆ ಹಾರುವನಲ್ಲ, ಇರಿದು ಮರೆಯುವುದಕ್ಕೆ ಕ್ಷತ್ರಿಯನಲ್ಲ, ವ್ಯವಹರಿಸುವುದಕ್ಕೆ ವೈಶ್ಯನಲ್ಲ, ಒಕ್ಕಲ ಮಗನ ತಪ್ಪ ನೋಡದೆ ಒಪ್ಪಗೊಳ್ಳಯ್ಯ, ಕಾಮಭೀಮ ಜೀವಧನದೊಡೆಯ ಎಂಬ ವಚನದ ಮೂಲಕ ಹಾರುವ, ಕ್ಷತ್ರಿಯ, ವೈಶ್ಯರಿಗಿಂತ ರೈತನ ಕಾಯಕವೇ ಶ್ರೇಷ್ಠವಾದ ಕಾಯಕ. ಹೀಗಾಗಿ ರೈತಾಪಿ ವರ್ಗವೇ ಶ್ರೇಷ್ಠ. ಅವರನ್ನು ಜೀವಕಾರಣ್ಯದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಜಿಲ್ಲಾ ಶ್ರೇಷ್ಠ ರೈತ ಪ್ರಶಸ್ತಿ ವಿಜೇತ ದೊಡ್ಡತುಪ್ಪೂರು ಶಶಿಕುಮಾರ್, ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತೇರಂಬಳ್ಳಿ ಗ್ರಾಮದ ರೈತ ಕುಮಾರ ಗಿಡಕ್ಕೆ ಕಸಿ ಮಾಡುವ ಬಗೆಯನ್ನು ತಿಳಿಸಿದರು. ರೈತರಾದ ತೇರಂಬಳ್ಳಿ ಶಾಂತಮಲ್ಲು, ಬೂದಿತಿಟ್ಟು ಪ್ರದೀಪಕುಮಾರ ಎಂಬುವವರ ಕೃಷಿ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ರೈತ ಮುಖಂಡರಾದ ಮುಳ್ಳೂರು ಷಣ್ಮುಖಸ್ವಾಮಿ, ಕುಂತೂರು ನಂಜುಂಡಸ್ವಾಮಿ, ಮಾಲಂಗಿ ಬಸವರಾಜು, ಲೋಕೇಶ, ಮಧುಕರ, ಪ್ರದೀಪ, ಯೋಗೇಶ ಇದ್ದರು.