ಜಿಲ್ಲೆ

ಮುತ್ಸಂದ್ರ ವಾರ್ಡ್‌ನಲ್ಲಿ ಮೂಲಸೌಕರ್ಯಕ್ಕೆ ಬರ, ನಿವೇಶನಗಳೇ ಕಸದ ತೊಟ್ಟಿ, ಬಹುತೇಕ ರಸ್ತೆಗಳಲ್ಲಿ ಚರಂಡಿಗಳೂ ಇಲ್ಲ

Bengaluru Rural

ರಾಜೇಶ್ ಎಸ್.ಜಿ ಮುಕ್ಕೇನಹಳ್ಳಿ ದೊಡ್ಡಬಳ್ಳಾಪುರ

ತಾಲೂಕಿನ 3ನೇ ವಾರ್ಡ್ ಮುತ್ಸಂದ್ರದ ಎಲ್ಲೆಂದರಲ್ಲಿ ಕಸದ ರಾಶಿ, ಸರಾಗವಾಗಿ ನೀರು ಹರಿಯದ ಚರಂಡಿಗಳು, ಕಾಲುವೆ, ನಿವೇಶನಗಳು, ರಸ್ತೆ ಬದಿಯಲ್ಲೂ ಕಸದ ಜತೆಗೆ ಗಿಡ-ಗಂಟಿಗಳಿಂದ ಅನೈರ್ಮಲ್ಯ ಕಾಡುತ್ತಿದ್ದು, ವಾರ್ಡ್ ಅವ್ಯವಸ್ಥೆಯ ಆಗರವಾಗಿದೆ.

ಮುತ್ಸಂದ್ರ, ನಾರಾಯಣಪ್ಪ ಬಡಾವಣೆ, ಪ್ರಿಯದರ್ಶಿನಿ ಬಡಾವಣೆ ವಾರ್ಡ್ ವ್ಯಾಪ್ತಿಗೆ ಸೇರಿದೆ. ಮುತ್ಸಂದ್ರ ವಾರ್ಡ್‌ನಲ್ಲಿ ಕಾಲನಿ ಸೇರಿ ಖಾಸಗಿ ಲೇಔಟ್ ಮತ್ತು ಜಿಲ್ಲಾ ಸರ್ಕಾರಿ ತಾಯಿ ಮಗು ಆಸ್ಪತ್ರೆ, ಪಾರ್ಕ್ ಒಳಗೊಂಡಿದೆ. ಆದರೆ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಇಲ್ಲಿನ ಜನ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ.

ಅನೈರ್ಮಲ್ಯದ ಜತೆಗೆ ರಸ್ತೆಗಳು ಹದಗೆಟ್ಟಿವೆ. ನಾರಾಯಣಪ್ಪ ಬಡಾವಣೆಯಲ್ಲಿ ಸುಮಾರು ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ, ಸಮರ್ಪಕ ರಸ್ತೆಗಳಿಲ್ಲದೆ ಮಳೆಗಾಲದಲ್ಲಿ ರಸ್ತೆ ಕೆಸರುಗದ್ದೆಯಾಗುತ್ತದೆ. ಇನ್ನು ಪ್ರಿಯದರ್ಶಿನಿ ಬಡಾವಣೆಯೂ ಇದರಿಂದ ಹೊರತಾಗಿಲ್ಲ, ಇದರೊಂದಿಗೆ ಮೂಲಸೌಕರ್ಯಗಳನ್ನು ಕಾಣದೆ ವಾರ್ಡ್ ಸೊರಗುತ್ತಿದೆ. ಮುತ್ಸಂದ್ರ ವಾರ್ಡ್‌ನ ಎಲ್ಲ ಬಡಾವಣೆಗಳಲ್ಲೂ ನಿವೇಶನಗಳು ಕಸ ತುಂಬುವ ತೊಟ್ಟಿಗಳಾಗಿವೆ. ಪರಿಣಾಮ ವಾರ್ಡ್‌ನಲ್ಲಿ ನೈರ್ಮಲ್ಯ ಕೊರತೆ ಎದ್ದು ಕಾಣುತ್ತಿದೆ. ಹಲವು ಡಾಂಬರು ರಸ್ತೆಗಳು ಹಾಳಾಗಿದ್ದು ಸವಾರರು ಪರದಾಡುತ್ತಿದ್ದಾರೆ.

ಇ-ಖಾತೆ ಇಲ್ಲ: ಮುತ್ಸಂದ್ರ ಕಾಲನಿಗೆ ಮೂಲಸೌಕರ್ಯ ಕೊರತೆ ಜತೆಗೆ ದಶಕಗಳಿಂದ ವಾಸಿಸುತ್ತಿರುವ ಮನೆಗಳಿಗೆ ಇ-ಖಾತೆ ಭಾಗ್ಯವೂ ಇಲ್ಲದಾಗಿದೆ. ಪೂರಕ ದಾಖಲೆಗಳನ್ನು ಒದಗಿಸುವಲ್ಲಿ ಸೂಕ್ತ ಮಾಹಿತಿ ನೀಡುವ ಹಂತದಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ. ದಾಖಲೆ ಇಲ್ಲದವರ ಪಾಡಂತೂ ದೇವರೇ ಗತಿ ಎಂಬಂತೆ ಆಗಿದೆ. ಇದರಿಂದ ಸ್ವಂತ ಮನೆಗಳಿಗೆ ಇ ಖಾತೆ ಪಡೆಯುವ ಮಾರ್ಗ ಕಾಣದ ನಿವಾಸಿಗಳ ಸ್ಥಿತಿ ಡೋಲಾಯಮಾನವಾಗಿದೆ.

1996ರಲ್ಲಿ ನಗರಸಭೆ: ರಾಜಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿದ್ದ ಮುತ್ಸಂದ್ರ 1996ರಲ್ಲಿ ನಗರಸಭೆ ವ್ಯಾಪ್ತಿಗೆ ಸೇರಿದೆ. ಪರಿಣಾಮ ಇಲ್ಲಿನ ಮನೆಗಳ ದಾಖಲೆಗಳನ್ನು ಅಂದು ಪಂಚಾಯಿತಿ ನಗರಸಭೆಗೆ ಕಾನೂನಾತ್ಮಕವಾಗಿ ವರ್ಗಾವಣೆ ಮಾಡಿ ಆಗಿದೆ. ಆದರೆ ಆ ದಾಖಲೆಗಳು ನಗರಸಭೆಯಲ್ಲಿ ಇಲ್ಲದ ಕಾರಣ ಸುಮಾರು 50 ಮನೆಗಳ ಇ ಖಾತೆ ಆಗದೆ ನಿಂತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಹುಡುಕಲು ಮುಂದಾಗದ ನಗರಸಭೆ ಆಡಳಿತ ಖಾತೆ ನಿಲ್ಲಿಸಿರುವುದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ.

ನಗರಸಭೆಗೆ ಸಿಗದ ಸಿಎ ಸೈಟ್; ಮುತ್ಸಂದ್ರ ವಾರ್ಡ್ ವ್ಯಾಪ್ತಿಯಲ್ಲಿದ್ದ ಲೇಔಟ್ ನಿರ್ಮಾಣವೊಂದಕ್ಕೆ 6 ತಿಂಗಳ ಹಿಂದೆ ನಗರಸಭೆಯಿಂದ ಎಂಡೋರ್ಸ್‌ಮೆಂಟ್ ಪಡೆದು ರಾಜಘಟ್ಟ ಗ್ರಾಪಂನಲ್ಲಿ ಇ-ಖಾತೆ ಪಡೆದಿದ್ದು, ಅಲ್ಲಿನ ಗ್ರಾಪಂಗೆ 2 ಸಿಎ ಸೈಟ್ ನೀಡಿದ್ದಾರೆ. ನಗರಸಭೆಗೆ ಸಿಗಬೇಕಿದ್ದ ಸಿಎ ಸೈಟ್ ನಗರಸಭೆ ಲೋಪದಿಂದ ಕೈಬಿಟ್ಟಿದೆ.

ವಾರ್ಡ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ, ರಸ್ತೆ ಚರಂಡಿ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ, ನಗರಸಭೆಯಲ್ಲಿ ಏನೇ ಕೇಳಿದರೂ ಟೆಂಡರ್ ಆಗಲಿ ಎಂಬ ಉತ್ತರ ಸಿಗುತ್ತಿವೆ. ಸ್ವಚ್ಛತೆ ವಿಚಾರದಲ್ಲಿ ಪೌರ ಕಾರ್ಮಿಕರ ಕೊರತೆ ಇದೆ ಎಂಬ ಉತ್ತರ ಮಾಮೂಲಿಯಾಗಿದೆ, ಅಧಿಕಾರಿಗಳು ವಾರ್ಡ್‌ಗೆ ಖುದ್ದು ಭೇಟಿ ನೀಡಿದರೆ ವಾಸ್ತವ ಪರಿಚಯವಾಗುತ್ತದೆ, ಇನ್ನು ಸ್ಕಂದ ಲೇ ಔಟ್‌ನ ಪ್ರದೇಶದಲ್ಲಿರುವ ಸಸಿಗಳು ಒಣಗುವ ಮುನ್ನ ನೀರು ಹಾಯಿಸಿ ಎಂದರೆ ಅದಕ್ಕೂ ಟೆಂಡರ್ ಆಗಲಿ ಎನ್ನುತ್ತಾರೆ. ಒಟ್ಟಾರೆ ವಾರ್ಡ್‌ನ ಅಭಿವೃದ್ಧಿಗೆ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು ಸಹಕರಿಸಬೇಕಿದೆ. ಸುಮಿತ್ರಾ ಆನಂದ್, ನಗರಸಭಾ ಸದಸ್ಯೆ ರಸ್ತೆ, ಚರಂಡಿ ನಿರ್ಮಾಣವಾಗದೆ ವಾರ್ಡ್‌ನಲ್ಲಿ ಮಳೆ ಬಂದರೆ ಸಾರ್ವಜನಿಕರು ಓಡಾಡಲು ಸಾಹಸ ಮಾಡಬೇಕಿದೆ, ಸ್ವಚ್ಛತೆ ಕೊರತೆಯಿಂದ ಜನ ಬೇಸತ್ತಿದ್ದಾರೆ, ಹೊರವಲಯದ ವಾರ್ಡ್‌ನಲ್ಲಿ ಇದುವರೆಗೆ ಪೌರಕಾರ್ಮಿಕರ ಸುಳಿವೇ ಇಲ್ಲ, ಇದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಮೇಶ್, ಪ್ರಿಯದರ್ಶಿನಿ ಬಡಾವಣೆ, ಮುತ್ಸಂದ್ರ ವಾರ್ಡ್