ಜಿಲ್ಲೆ

ಮುತ್ತು ಮಾರಮ್ಮ ದೇಗುಲದಲ್ಲಿ ಪೂಜಾ ಮಹೋತ್ಸವ

ಲಲಾಟಾಕ್ಷ ಎಸ್

ಹುಣಸೂರು: ಹುಣಸೂರಿನ ಗ್ರಾಮ ದೇವತೆಯಾದ ನಗರದ ಮಾರೀಗುಡಿ ಬೀದಿಯ ಶ್ರೀ ಮುತ್ತು ಮಾರಮ್ಮ ಅಮ್ಮನವರ ದೇವಾಲಯದಲ್ಲಿ ಈ ವರ್ಷದ ಆಷಾಢ ಶುಕ್ರವಾರಗಳಂದು ಅಮ್ಮನವರಿಗೆ ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಲಿವೆ. ದೇವರ ಉತ್ಸವ, ಭಜನಾ ಕಾರ್ಯಕ್ರಮ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮುತ್ತುಮಾರಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಚ್.ವೈ.ಮಹದೇವ್ ತಿಳಿಸಿದ್ದಾರೆ.

ಜೂ.27ರಿಂದ ಆಷಾಢ ಶುಕ್ರವಾರ ಆರಂಭಗೊಳ್ಳುತ್ತಿದ್ದು ಜು.4, 11 ಮತ್ತು 18ರಂದು ದೇವಾಲಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಆಷಾಢ ಶುಕ್ರವಾರದಂದು ಬೆಳಗ್ಗೆ 6 ಗಂಟೆಯಿಂದ ಅಮ್ಮನವರಿಗೆ ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಅಂದು ಬೆಳಗ್ಗಿನಿಂದಲೇ ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 10 ಗಂಟೆಯವರೆಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ, ದೇವರ ಉತ್ಸವ: ಸಂಜೆ ದೇವಾಲಯದ ಆವರಣದಲ್ಲಿ ಸ್ಥಳೀಯ ಕಲಾವಿದರಿಂದ ದೇವರ ಭಜನೆ, ಸುಗಮ ಸಂಗೀತ, ಭಾವಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಾಮಂಗಳಾರತಿ ನಂತರ ದೇವಾಲಯದ ಸುತ್ತ ಉತ್ಸವ ಮೂರ್ತಿಯ ಉತ್ಸವ ನೆರವೇರಲಿದೆ. ಕೊನೆಯ ಆಷಾಢ ಶುಕ್ರವಾರದಂದು ಅದ್ದೂರಿ ಉತ್ಸವ ಮೆರವಣಿಗೆ ಆಯೋಜಿಸಲಾಗಿದೆ. ಅಂದು ಮೆರವಣಿಗೆಯಲ್ಲಿ ಕೇರಳ, ತಮಿಳುನಾಡಿನಿಂದ ಚಂಡೆವಾದನ, ಒಂಬತ್ತು ದೇವಿಯರ ದೀಪಾಲಂಕೃತಗೊಂಡ ಟ್ಯಾಬ್ಲೋಗಳು, ಜಾನಪದ ಕಲಾ ತಂಡಗಳು, ಮಂಗಳವಾದ್ಯ ಪಾಲ್ಗೊಳ್ಳಲಿವೆ. ಉತ್ಸವವು ದೇವಾಲಯದ ಆವರಣದಿಂದ ಆರಂಭಗೊಂಡು ಎಚ್.ಡಿ.ಕೋಟೆ ವೃತ್ತ, ಜೆ.ಎಲ್.ಬಿ. ರಸ್ತೆ, ಕರೀಗೌಡರ ಬೀದಿ, ಬನ್ನಿಬೀದಿ, ಮಾರೀಗುಡಿ ಬೀದಿಯ ಮೂಲಕ ದೇವಾಲಯದ ಆವರಣದಲ್ಲಿ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ಬೆಳ್ಳಿರಥ ಸಿದ್ಧ: ಭಕ್ತರ ಆಶಯ ಮತ್ತು ಉದಾರ ದೇಣಿಗೆಯ ನೆರವಿನಿಂದ 1 ಕೋಟಿ ರೂ. ವೆಚ್ಚದಲ್ಲಿ 95 ಕೆಜಿ ತೂಕದ 12 ಅಡಿ ಎತ್ತರದ ಬೆಳ್ಳಿ ರಥ ಸಿದ್ಧವಾಗಿದೆ. ಅಂದಾಜು 30 ಕೆಜಿ ತೂಕದ ಅಮ್ಮನವರ ಉತ್ಸವ ಮೂರ್ತಿ ಮತ್ತು ಪೀಠದ ನಿರ್ಮಾಣ ಕಾರ್ಯ ನಡೆದಿದ್ದು ಎಲ್ಲವೂ ಸಂಪೂರ್ಣಗೊಂಡ ನಂತರ ಮುಂದಿನ ದಿನಗಳಲ್ಲಿ ಮೆರವಣಿಗೆಗೆ ಬೆಳ್ಳಿ ರಥವನ್ನೇ ಬಳಸಲಾಗುವುದು ಎಂದರು.

10 ಸಾವಿರ ಲಡ್ಡು ವಿತರಣೆ:

ದೇವಾಲಯ ಟ್ರಸ್ಟ್‌ನ ಕಾರ್ಯದರ್ಶಿ ಅಶೋಕ್ ರಾಜಲಿಂಗಯ್ಯ ಪ್ರತಿವರ್ಷದಂತೆ ಈ ಬಾರಿಯೂ ಮೂರನೇ ಆಷಾಢ ಶುಕ್ರವಾರದಂದು(ಜು.11) 10 ಸಾವಿರಕ್ಕೂ ಹೆಚ್ಚು ಲಡ್ಡುಗಳನ್ನು ಪ್ರಸಾದ ರೂಪದಲ್ಲಿ ನೀಡಲಿದ್ದಾರೆ. ತಿರುಪತಿ ಲಡ್ಡಿನ ಗಾತ್ರ ಮತ್ತು ರುಚಿಯಲ್ಲೇ ಇಲ್ಲಿನ ಲಡ್ಡು ಕೂಡ ಇರಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ಎಸ್.ಶಿವಯ್ಯ, ಪ್ರಧಾನ ಕಾರ್ಯದರ್ಶಿ ಡೇರಿ ಈಶ್ವರ್, ಕಾರ್ಯದರ್ಶಿ ಅಶೋಕ್, ಖಜಾಂಚಿ ಗುಂಡುಮಣಿ, ನಿರ್ದೇಶಕ ನರಸಿಂಹಯ್ಯ ಇದ್ದರು.

-------------

1 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಕಿರೀಟ

ನಮ್ಮೆಲ್ಲರನ್ನೂ ಕಾಯುತ್ತಿರುವ ಅಮ್ಮನವರ ಮೂರ್ತಿಗೆ ಭಕ್ತರ ನೆರವಿನೊಂದಿಗೆ ಚಿನ್ನದ ಕಿರೀಟ ಅರ್ಪಿಸಲಾಗುತ್ತಿದ್ದೇವೆ. 1 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಕಿರೀಟ ನಿರ್ಮಾಣಕ್ಕೆ ಸಮಿತಿ ಮುಂದಾಗಿದೆ. ಆಷಾಢ ಶುಕ್ರವಾರಗಳಂದು ಮತ್ತು ನವರಾತ್ರಿಯ ಒಂಬತ್ತು ದಿನಗಳ ವಿಶೇಷ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಅನನ್ಯವಾಗಿದ್ದು, ನಂಬಿದ ಭಕ್ತರ ಕೈಹಿಡಿಯುವ ಅಮ್ಮನವರ ಆಶೀರ್ವಾದ ಎಲ್ಲರ ಮೇಲಿರಲಿದೆ.

ಎಚ್.ವೈ.ಮಹದೇವ್, ಅಧ್ಯಕ್ಷ, ಶ್ರೀ ಮುತ್ತುಮಾರಮ್ಮ ದೇವಾಲಯ ಟ್ರಸ್ಟ್, ಹುಣಸೂರು

ಭಕ್ತರು ನೀಡುತ್ತಿರುವ ಸಹಕಾರದಿಂದಾಗಿ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಆಷಾಢ ಶುಕ್ರವಾರಗಳ ವಿಶೇಷ ಕಾರ್ಯಕ್ರಮಗಳಲ್ಲಿ ನಗರದ ಎಲ್ಲ ಭಕ್ತರು ಮತ್ತು ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕು.

ಎಚ್.ಎಸ್.ಶಿವಯ್ಯ, ಉಪಾಧ್ಯಕ್ಷ, ಶ್ರೀ ಮುತ್ತುಮಾರಮ್ಮ ದೇವಾಲಯ ಟ್ರಸ್ಟ್, ಹುಣಸೂರು

6 ಶತಮಾನಗಳ ಇತಿಹಾಸ

ಹುಣಸೂರು ಸುತ್ತಮುತ್ತಲ ಗ್ರಾಮಗಳಿಗೆ ಪ್ಲೇಗ್, ಕಾಲರ ಮುಂತಾದ ರೋಗ ರುಜಿನಗಳ ಬಾಧೆಯಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದ ವೇಳೆ ತಾಲೂಕಿನ ರತ್ನಪುರಿಯಲ್ಲಿ ಆಳುತ್ತಿದ್ದ ಪಾಳೆಗಾರರು ತಮ್ಮಲ್ಲಿದ್ದ ಮುತ್ತು ಮಾರಮ್ಮದೇವರ ವಿಗ್ರಹವನ್ನು ನೀಡಿ ಊರಿನಲ್ಲಿಟ್ಟು ಪೂಜಿಸಲು ತಿಳಿಸಿದ್ದರು. ಅದರಂತೆ ತಾಯಿ ಮುತ್ತುಮಾರಮ್ಮ ಹುಣಸೂರಿನ ಮಾರೀಗುಡಿ ಬೀದಿಯಲ್ಲಿ ಪ್ರತಿಷ್ಠಾಪಿತಳಾದಳು. ತಾಯಿ ಇಲ್ಲಿ ನೆಲೆಯೂರಿದ ನಂತರ ರೋಗರುಜಿಗಳು ಮಾಯವಾದವು. ಬೇಡಿ ಬಂದ ಭಕ್ತರ ಕೈಹಿಡಿದ ಅಮ್ಮ ಎಲ್ಲರ ತಾಯಿಯಾಗಿ, ಗ್ರಾಮ ದೇವತೆಯಾಗಿ ಶಾಶ್ವತವಾಗಿ ನೆಲೆನಿಂತಳು. ಅವಳು ಮಾಡಿರುವ ಪವಾಡಗಳಿಗೆ ಲೆಕ್ಕವೇ ಇಲ್ಲ. ಈ ಹಿಂದಿನ ಅಧ್ಯಕ್ಷ ಅಲಂಕಾರ್ ರಾಜಲಿಂಗಯ್ಯನವರ ಕುಟುಂಬ ದೇಗುಲದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇಲ್ಲಿನ ವಿಶೇಷವೆಂದರೆ ಅಮ್ಮನವರಿಗೆ ಮುಸ್ಲಿಮರು, ಕ್ರೈಸ್ತರು ಕೂಡ ಭಕ್ತರಿದ್ದಾರೆ. ಮಾರಿಗುಡಿ ಬೀದಿಯ ಸುತ್ತಮುತ್ತಲಿನಲ್ಲಿರುವ ತಮಿಳು ಸಮುದಾಯದವರೂ ಈ ದೇವಿಯ ಕರಗ ಉತ್ಸವವನ್ನು ಆಚರಿಸಿ ಸಂಭ್ರಮಿಸುತ್ತಾರೆ ಎಂದು ಟ್ರಸ್ಟ್‌ನ ಅಶೋಕ್, ಡೇರಿ ಈಶ್ವರ್, ಗುಂಡುಮಣಿ, ನರಸಿಂಹಯ್ಯ ನೆನೆಯುತ್ತಾರೆ.