ಕಲಬುರಗಿ: ಯಡ್ರಾಮಿ ತಾಲೂಕಿನ ಮುತ್ತಕೋಡದಲ್ಲಿ ೨೨ ವರ್ಷದ ಹಿಂದೆ ಕೆರೆ ನಿರ್ಮಿಸಲು ಜಿಪಂಗೆ ಜಮೀನು ನೀಡಿದ್ದ ವ್ಯಕ್ತಿ ಮತ್ತು ಅಧಿಕಾರಿಗಳು ಸುಳ್ಳು ದಾಖಲೆ ನಿರ್ಮಿಸಿ, ಕೆರೆ ಜಮೀನು ಕಬಳಿಸಲು ಪಿತೂರಿ ನಡೆಸಿದ್ದು, ಅದಕ್ಕೆ ತಡೆ ನೀಡಬೇಕು ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನಾ ಸಂಘಟನೆಯ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಮಹೇಶಕುಮಾರ ರಾಠೋಡ್ ಆಗ್ರಹಿಸಿದ್ದಾರೆ.
೨೨ ವರ್ಷದ ಹಿಂದೆ ಗ್ರಾಮದ ರಾಜಶೇಖರ ಕೊಂಗAಡಿ ಅವರು ಜಿನುಗು ಕೆರೆ (ಗೋಕಟ್ಟೆ) ನಿರ್ಮಿಸಲು ಜಿಪಂಗೆ ಜಮೀನು ನೀಡಿದ್ದಾರೆ. ಅಲ್ಲಿ ಕೆರೆ ನಿರ್ಮಿಸಲಾಗಿದೆ. ಆದರೆ ಜಮೀನು ವಾಸ್ತವದಲ್ಲಿ ಸರ್ಕಾರದ ಹೆಸರಿಗೆ ಆಗದಂತೆ ರಾಜಶೇಖರ ಕೊಂಗಂಡಿ, ಅಧಿಕಾರಿಗಳ ಸಹಾಯದಿಂದ ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೆರೆಯಲ್ಲಿ ಹಲವು ಸರ್ಕಾರಿ ಕಾಮಗಾರಿಗಳು ನಡೆದಿವೆ. ಈ ಮಧ್ಯೆ ಕೆರೆಯ ಜಮೀನನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಆರತಿ ರಾಠೋಡ್ ಅವರಿಗೆ ರಾಜಶೇಖರ ಕೊಂಗAಡಿ ನೀಡಿದ್ದಾರೆ (ದಾಖಲೆಯಲ್ಲಿ ಪ್ರಕ್ರಿಯೆ ಆಗಿದ್ದು, ವಾಸ್ತವದಲ್ಲಿ ಆರತಿ ಅವರಿಗೆ ಈ ಬಗ್ಗೆ ತಿಳಿದೇ ಇಲ್ಲ). ಜಮೀನು ನೀಡಿದ್ದಕ್ಕಾಗಿ ರಾಜಶೇಖರ್‌ಗೆ ನಿಗಮದಿಂದ ೮.೧೯ ಲಕ್ಷ ರೂ. ಸಂದಾಯವಾಗಿದೆ ಎಂದು ತಿಳಿಸಿದರು.
ಆರತಿ ರಾಠೋಡ್ ಅವರ ಹೆಸರಿನ ಜಮೀನನ್ನು ಅವರಿಗೆ ತಿಳಿಯದೇ ಪುನಃ ರಾಜಶೇಖರ ಕೊಂಗAಡಿ ತಮ್ಮ ಸೊಸೆಯ ಹೆಸರಿಗೆ ಜಮೀನು ಮಾಡಿಸಿಕೊಂಡಿದ್ದಾರೆ. ಸತತ ಸುಳ್ಳು ದಾಖಲೆ ಸೃಷ್ಟಿಸಿರುವ ಅಧಿಕಾರಿಗಳು, ಸರ್ಕಾರಿ ಜಮೀನು ದಾಖಲೆಯಲ್ಲಿ ಕಬಳಿಸಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆ ಉಳಿಸಬೇಕು ಎಂದು ಆಗ್ರಹಿಸಿದರು. ಶಂಕರ ಕಟ್ಟಿಸಂಗಾವಿ, ಬಾಬು ಪಾಟೀಲ್, ಮಲ್ಲಿಕಾರ್ಜುನ ದೊಡ್ಡಮನಿ, ಭೀಮನಗೌಡ ಪೊಲೀಸ್ ಪಾಟೀಲ್ ಇದ್ದರು.