filter: 0; fileterIntensity: 0.0; filterMask: 0; module: j; hw-remosaic: 0; touch: (0.46249998, 0.46249998); modeInfo: ; sceneMode: Auto; cct_value: 0; AI_Scene: (-1, -1); aec_lux: 297.41565; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಮುಡುಕುತೊರೆ ಜಾತ್ರೆಗೆ ಮೂಲ ಸೌಕರ್ಯ ಕಲ್ಪಿಸಿ

ಬಾಲಮುರಳಿಕೃಷ್ಣ

ತಿ.ನರಸೀಪುರ: ಹದಿನೇಳು ದಿನಗಳ ಕಾಲ ಮುಡುಕುತೊರೆಯಲ್ಲಿ ನಡೆಯುವ ಶ್ರೀ ಭ್ರಮರಾಂಬ ಶ್ರೀ ಮಲ್ಲಿಕಾರ್ಜುನಸ್ವಾಮಿಯ ಜಾತ್ರೋತ್ಸವಕ್ಕೆ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸುವುದರ ಜತೆಗೆ ಜಾತ್ರೆ ನಡೆಯುವ ಅಷ್ಟೂ ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಮುಡುಕುತೊರೆಯಲ್ಲಿರುವ ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ಬುಧವಾರ ಜಾತ್ರೋತ್ಸವದ ಸಿದ್ಧತೆಗಳನ್ನು ಆರಂಭಿಸಲು ಮುಜರಾಯಿ ಇಲಾಖೆಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇವರ ಮೇಲೆ ನಂಬಿಕೆಯನ್ನಿಟ್ಟಿರುವ ಲಕ್ಷಾಂತರ ಜನರು ಜಾತ್ರೆಯಲ್ಲಿ ಭಾಗವಹಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜನ, ಜಾನುವಾರುಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ತರಲು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ತಾಕೀತು ಮಾಡಿದರು.

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಈ ಬಾರಿ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದ್ದು, ಮೂಲ ಸೌಕರ್ಯಗಳ ಕಾಮಗಾರಿಗಳ ಅನುಷ್ಠಾನಕ್ಕೆ ಅನುದಾನದ ಕೊರತೆಯಾದರೆ ಹೆಚ್ಚುವರಿ ಅನುದಾನಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಪೂರ್ವಸಿದ್ಧತೆ ಯೋಜನೆಯಲ್ಲಿ ಪ್ರಸ್ತಾಪಿಸಿ, ನಮ್ಮ ಗಮನಕ್ಕೂ ತರಬೇಕು. ದನಗಳ ಪರಿಷೆಗೆ ಉತ್ತೇಜನ ನೀಡಲು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ಜತೆ 36ಕ್ಕೂ ಹೆಚ್ಚು ಜೋಡಿ ಜಾನುವಾರುಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಬೇಕು. ಅದಕ್ಕಾಗಿ ಈ ಭಾಗದ ಸಂಸದನಾಗಿ 3 ಲಕ್ಷ ರೂ. ಮತ್ತು ಸ್ಥಳೀಯ ಪ್ರಾಯೋಜಕರಿಂದ 2 ಲಕ್ಷ ರೂ.ಗಳು ಸೇರಿದಂತೆ ಒಟ್ಟು 5 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ಸಭೆಯಲ್ಲಿಯೇ ಸುನೀಲ್ ಬೋಸ್ ಘೋಷಿಸಿದರು.

ಉಪ ವಿಭಾಗಾಧಿಕಾರಿ ರಕ್ಷಿತ್ ಮಾತನಾಡಿ, ಶ್ರೀ ಭ್ರಮರಾಂಬ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಜಾತ್ರೋತ್ಸವದಲ್ಲಿ ಫೆ.7ರ ಬ್ರಹ್ಮರಥೋತ್ಸವ ಹಾಗೂ 10ರ ತೆಪ್ಪೋತ್ಸವ ಪೂಜೆಗಷ್ಟೇ ಸೀಮಿತವಾಗಿರಲಿದೆ. ಜ.31 ರಿಂದಲೇ ಧಾರ್ಮಿಕ ಪೂಜಾ ಕಾರ್ಯಗಳು ವಿಧ್ಯುಕ್ತವಾಗಿ ಆರಂಭವಾಗಲಿದ್ದು, ಈ ತಿಂಗಳ 25 ರಿಂದಲೇ ದನಗಳ ಪರಿಷೆ ನಡೆಯಲಿದೆ. ಕಳೆದ ವರ್ಷದ ಜಾತ್ರೋತ್ಸವದ ಮಾದರಿಯಲ್ಲಿ ವಿವಿಧ ಇಲಾಖೆಗಳಿಗೆ ಪೂರ್ವ ಸಿದ್ಧತಾ ಕಾಮಗಾರಿಗಳನ್ನು ನಡೆಸುವಂತೆ ಜವಾಬ್ದಾರಿಯನ್ನು ನೀಡಲಾಗಿದೆ. ಅದರಲ್ಲೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಶುಪಾಲನಾ ಮತ್ತು ವೈದ್ಯಕೀಯ ಸೇವೆಗಳ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ ಎಂದು ವಿವರಿಸಿದರು.

ಸೆಸ್ಕ್ ಉಪ ವಿಭಾಗದ ಎಇಇ ಕೆ.ವಿ.ವೀರೇಶ್ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಎಇಇ ಎಸ್.ಮಂಜುನಾಥ್, ಶೆಟ್ಟಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಪಿ.ಕೆಂಪೇಗೌಡ, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ತಾಂತ್ರಿಕ ಅಧಿಕಾರಿಗಳು ಕೈಗೊಳ್ಳಲಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಅನಂತರಾಜು, ಭೂ ನ್ಯಾಯ ಮಂಡಳಿಯ ಸದಸ್ಯ ಕುಕ್ಕೂರು ಗಣೇಶ್, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ತಲಕಾಡು ಸಮೂಹ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಟಿ.ಬೆಟ್ಟಹಳ್ಳಿ ಎಂ.ನಾಗರಾಜು, ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ವೆಂಕಟೇಶ್ ಪ್ರಸಾದ್, ಅರ್ಚಕ ಎಂ.ಪಿ.ಜಗದೀಶ್‌ಮೂರ್ತಿ, ಎನ್.ಕೋಕಿಲಾ, ಕೆ.ನಾಗಮ್ಮ, ಟಿ.ಎಂ.ವಿಜಯಕುಮಾರ್, ಆರ್.ಮಾದೇಶ್, ಗ್ರಾ.ಪಂ. ಉಪಾಧ್ಯಕ್ಷ ದಕ್ಷಿಣಾಮೂರ್ತಿ, ತಾ.ಪಂ ಮಾಜಿ ಸದಸ್ಯೆ ಮಲ್ಲಾಜಮ್ಮ, ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್, ಪಶುಪಾಲನೆ ಸಹಾಯಕ ನಿರ್ದೇಶಕ ಲಿಂಗರಾಜು, ಲೋಕೋಪಯೋಗಿ ಎಇಇ ಎಸ್. ಸತೀಶ್ ಚಂದ್ರನ್, ಪೊಲೀಸ್ ಇನ್‌ಸ್ಪೆಕ್ಟರ್ ಆನಂದ್‌ಕುಮಾರ್, ತಾ.ಪಂ ಮಾಜಿ ಉಪಾಧ್ಯಕ್ಷ ಪ್ರಸನ್ನ, ಮಾಜಿ ಸದಸ್ಯ ನರಸಿಂಹ ಮಾದನಾಯಕ, ಸಚಿವರ ಆಪ್ತ ಸಹಾಯಕ ಬಸವರಾಜು, ಮುಖಂಡರಾದ ಎಸ್.ಮಹದೇವಶೆಟ್ಟಿ, ಶಂಭುಲಿಂಗ, ಮಹೇಂದ್ರ, ಮೇದನಿ ಕುಮಾರ್, ಮಾದೇಶ, ಪ್ರಸನ್ನ ಇತರರಿದ್ದರು.