ಬಳ್ಳಾರಿ ; ಮುಡಾ ಹಗರಣದಲ್ಲಿ ಕೇವಲ 14 ಸೈಟ್ ಹಾಗೂ 62 ಕೋಟಿ ವಿಚಾರ ಅಲ್ಲ, ಸಿಎಂ ಸಿದ್ದರಾಮಯ್ಯ ಐದು ಸಾವಿರ ಕೋಟಿ ರೂ. ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಆರೋಪಿಸಿದರು.
ನಗರದ ಅಲ್ಲಿಪುರ ಮಠಕ್ಕೆ ಗುರುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದವರ ಮೂಲಕ ಬೇನಾಮಿ ಆಸ್ತಿ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೇಳಿ ಸಾಕಾಗಿದೆ. ಈ ಹಿಂದೆ ವಾಜಪೇಯಿ ಹಾಗೂ ಬಿ. ಎಸ್. ಯಡಿಯೂರಪ್ಪ ನನ್ನ ಮೇಲೆ ಆರೋಪ ಕೇಳಿ ಬಂದ ಕೂಡಲೇ ರಾಜೀನಾಮೆ ನೀಡುವಂತೆ ಸೂಚಿಸಿದ್ದರು, ಅದರಂತೆ ರಾಜೀನಾಮೆ ನೀಡಿ ಸರ್ಕಾರ ವಿಸರ್ಜನೆ ಮಾಡಲಾಗಿತ್ತು. ಸದ್ಯ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜಿಲ್ಲೆಯಲ್ಲಿ ಹಲವು ಸ್ಟೀಲ್ ಕಂಪನಿಗಳು ಸ್ಥಾಪನೆಯಾಗಬೇಕಿತ್ತು. ಆದರೆ, ಸಿದ್ದರಾಮಯ್ಯ ಕಲ್ಲು ಹಾಕಿ, ಜನರ ಉದ್ಯೋಗ ಕಸಿದರು. ವಾಲ್ಮೀಕಿ ಹಗರಣದಲ್ಲಿ ಕೋಟಿ ಕೋಟಿ ಹಗರಣ ನಡೆದಿದೆ. 180 ಕೋಟಿ ರೂ. ಅಲ್ಲ, 80 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಸಿದ್ದರಾಮಯ್ಯ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಿ. ನಾಗೇಂದ್ರ ಮಾತ್ರ ಅಲ್ಲ, ರಾಜ್ಯ ಸರ್ಕಾರವೇ ಭಾಗಿಯಾಗಿದೆ ಎಂದರು.
ಆನಂದ್ ಸಿಂಗ್ ಗೆ ಪರೋಕ್ಷ ಟಾಂಗ್ : ಈ ಹಿಂದೆ ಬಳ್ಳಾರಿ ಎಂದರೆ ಹಂಪಿ ಎನ್ನುವ ಆಗಿತ್ತು. ಬಳ್ಳಾರಿಯಿಂದ ಹಂಪಿಯನ್ನು ದೂರ ಮಾಡಿದವರು ವನವಾಸ ಅನುಭವಿಸುತ್ತಿದ್ದಾರೆ ಎಂದು ಮಾಜಿ ಸಚಿವ ಆನಂದ ಸಿಂಗ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಸಹೋದರ, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ನಮ್ಮಿಬ್ಬರ ನಡುವೆ ಯಾವುದೇ ಮುನಿಸಿಲ್ಲ. ಮಾಜಿ ಸಚಿವ ಶ್ರೀರಾಮುಲು ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿಂದ ಸ್ವಾಗತಕ್ಕೆ ಬಂದಿಲ್ಲ. ಅವರ ಆರೋಗ್ಯದ ಬಗ್ಗೆ ನನ್ನ ಜತೆ ಹೇಳಿದ್ದಾರೆ ಎಂದರು. ಕೆಲವೇ ದಿನಗಳಲ್ಲಿ ನಡೆಯಲಿರುವ ಸಂಡೂರು ವಿಧಾನಸಭಾ ಉಪ ಚುನಾವಣೆ ವೇಳೆಗೆ ಬಂದಿರುವೆ. ನನಗೆ ಉಸ್ತುವಾರಿ ನೀಡದಿದ್ದರು ಕೂಡ, ಬಿಜೆಪಿ ಸಾಮಾನ್ಯ ಕಾರ್ಯಕರ್ತನಂತೆ ದುಡಿದು ಅಭ್ಯರ್ಥಿಯನ್ನು ಗೆಲ್ಲಿಸುವೆ. ಅ. 4 ರಂದು ಜಿಲ್ಲೆಯಿಂದ ಸಂಡೂರಿಗೆ ಪಾದಯಾತ್ರೆ ಮಾಡಿ ಕುಮಾರಸ್ವಾಮಿ ದರ್ಶನ ಪಡುವೆ. ಬಳಿಕ ಉಪ ಚುನಾವಣೆಯ ತಯಾರಿ ನಡೆಸಲಾಗುವುದು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಜತೆಗೂಡಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿರುವೆ. ಈಗ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಮಾಡುವೆ ಎಂದರು. ಜಿಲ್ಲೆಯಿಂದ ಹದಿನಾಲ್ಕು ವರ್ಷ ದೂರವಿದ್ದು ಸಾಕಷ್ಟು ನೋವು ಅನುಭವಿಸಿದ್ದೆ, ನಿತ್ಯವೂ ದೇವರನ್ನು ಬೇಡಿದೆ. ಜನರ ಸೇವೆ ಮಾಡಲು ಅನುಗ್ರಹಿಸಿದ್ದಾರೆ ಎಂದರು.