ಮೈಸೂರು: ನಮ್ಮ ತಾಯಿ ಅಂತರ್ಮುಖಿ. ರಾಜಕಾರಣದಿಂದ ದೂರ ಇರುವವರು. ಅಂತಹವರನ್ನು ಮುಡಾ ಪ್ರಕರಣದಲ್ಲಿ ಎಳೆದು ತಂದಿದ್ದು ಬೇಸರವಾಗಿದೆ ಎಂದು ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಾಯಿ ರಾಜಕಾರಣಕ್ಕೆ ಎಂದೂ ಬಂದವರಲ್ಲ. ಅವರ ಹೆಸರು ತಂದು ಬೀದಿಗೆ ಬರುವಂತೆ ಮಾಡಿದರು. ಲೋಕಾಯುಕ್ತದಲ್ಲಿ ಅವರು ವಿಚಾರಣೆ ಎದುರಿಸುವಂತೆ ಮಾಡಿದರು.
ಅವರಿಗೆ ಸಂಕೋಚ ಇರುವ ಕಾರಣ ನಾನೇ ವಿಚಾರಣೆಗೆ ಕರೆದುಕೊಂಡು ಹೋಗಿದ್ದೆ. ತಂದೆಯವರ 40 ವರ್ಷದ ರಾಜಕಾರಣ ವಿಚಾರದಲ್ಲೂ ಕಪ್ಪುಚುಕ್ಕೆ ತರಲು ಯತ್ನ ನಡೆದಿದೆ. ಲೋಕಾಯುಕ್ತದಲ್ಲಿ ಸುಳ್ಳು ದಾಖಲೆಯಾದರೂ ವಿಚಾರಣೆ ಎದುರಿಸಬೇಕಾಯಿತು. ಯಾರು ಎಷ್ಟೇ ಆರೋಪ ಮಾಡಿದರೂ ನಾವು ಆರೋಪದಿಂದ ಮುಕ್ತರಾಗುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮುಡಾ ಪ್ರಕರಣದಲ್ಲಿ ಸಿಎಂ, ಅವರ ಕುಟುಂಬ ಟಾರ್ಗೆಟ್ ಆಗಿದೆ. ಮುಡಾದಲ್ಲಿ ಯಾವುದೂ ಕಾನೂನುಬಾಹಿರವಾಗಿಲ್ಲ. ನಮ್ಮ ಜಮೀನು ವಶಕ್ಕೆ ಪಡೆದುಕೊಂಡಿದ್ದಕ್ಕೆ ಶೇ.50ರಷ್ಟು ಸೈಟ್ ನೀಡಿದ್ದಾರೆ. ಆದರೂ ಕೇಂದ್ರ ಸರ್ಕಾರ, ರಾಜ್ಯಪಾಲರನ್ನು ಬಳಸಿಕೊಂಡು ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ನಡೆದಿದೆ ಎಂದು ಕಿಡಿಕಾರಿದರು.
ಕೆಸರೆ ಭೂಮಿಯನ್ನು ನಮ್ಮ ಸೋದರ ಮಾವ ತೆಗೆದುಕೊಂಡಿದ್ದು ಗೊತ್ತಿರಲಿಲ್ಲ. ಆವಾಗ ನಾನು ಮೆಡಿಕಲ್ ಓದುತ್ತಿದ್ದೆ. ಈ ವಿಚಾರ ತಂದೆಯವರಿಗೂ ಗೊತ್ತಿರಲಿಲ್ಲ. ಆದರೆ, ತಾಯಿಗೆ ಈ ವಿಚಾರ ತಿಳಿದಿರಬಹುದು. ನಮ್ಮ ತಾತ ತೀರಿ ಹೋದ ಬಳಿಕ ಆಸ್ತಿಯನ್ನು ಇಬ್ಬರು ಗಂಡು ಮಕ್ಕಳಿಗೆ ನೀಡಿದ್ದರು. ನಮ್ಮ ತಾಯಿಗೆ ಏನೂ ನೀಡಿಲ್ಲ ಎಂದು ಅಜ್ಜಿಯ ಆಸೆಯಂತೆ ಮಾವ ನೀಡಿದ್ದರು ಎಂದು ತಿಳಿಸಿದರು.
ತಾಯಿಗೆ ಭೂಮಿ ಸಿಕ್ಕಾಗ ಅದು ಮುಡಾ ವಶಕ್ಕೆ ಪಡೆದಿದ್ದು ಗೊತ್ತಿರಲಿಲ್ಲ. ಆ ವಿಚಾರ ತಿಳಿದಾಗ ಬದಲಿ ಜಮೀನು ಕೊಡಿ ಅಂತ ಕೇಳಿದರು. ಸೋದರಮಾವನಿಂದ ತಾಯಿಗೆ ಭೂಮಿ ಸಿದ್ದಿದ್ದು ತಂದೆ ಹಾಗೂ ನನಗೆ ಗೊತ್ತಿತ್ತು. ನಾನು ಶಾಸಕನಾಗಿದ್ದಾಗ ಈ ವಿಚಾರ ಮುಡಾದಲ್ಲಿ ಪ್ರಸ್ತಾಪಕ್ಕೆ ಬಂದಿರಲಿಲ್ಲ.
ಆದರೆ, ಯಾರ್ಯಾರು ಭೂಮಿ ಕಳೆದುಕೊಂಡಿದ್ದಾರೆಯೋ ಅವರಿಗೆ ಕೊಡಿ ಅಂತ ಹೇಳಿದ ಸಭೆಯಲ್ಲಿ ಭಾಗಿಯಾಗಿದ್ದೆ. ಈವರೆಗೂ ನಾವ್ಯಾರೂ ಶಿಫಾರಸು ಪತ್ರ ಕೊಟ್ಟಿಲ್ಲ. ಆದರೆ, ತಾಯಿ ಅವರು ಬದಲಿ ಸೈಟ್ ನೀಡಿ ಎಂದು ಮನವಿ ಪತ್ರ ನೀಡಿದ್ದರು. ತಂದೆಯವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು. ತಾಯಿ ಅವರಿಗೆ ಇದರಿಂದ ಬೇಸರವಾಯಿತು. ಈ ಸೈಟಿನಿಂದಲೇ ಆಗಿದ್ದು ಎಂದು ನೊಂದುಕೊಂಡರು ಎಂದು ಹೇಳಿದರು.
ಮುಡಾ ಪ್ರಕರಣವು ರಾಜಕೀಯ ದುರುದ್ದೇಶದಿಂದ ಕೂಡಿದೆ. ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡುವಂತಿಲ್ಲ. ನ್ಯಾಯಾಲಯದಲ್ಲೂ ನಮಗೆ ನ್ಯಾಯ ಸಿಕ್ಕಿಲ್ಲ. ತನಿಖಾ ಸಂಸ್ಥೆಗಳು ಕೂಡ ಪ್ರಭಾವ ಬೀರುತ್ತಿವೆ. ಪ್ರಕರಣಕ್ಕೆ ಸಂಬಂಧ ಇಲ್ಲದವರ ವಿಚಾರಣೆ ಮಾಡಲಾಗುತ್ತಿದೆ. ಇದೇ ಕೇಸ್ ಅಲ್ಲದೇ ಯಾವುದಾದರೂ ಕೇಸ್‌ನಲ್ಲಿ ಸಿಲುಕಿಸುವ ಹುನ್ನಾರವೂ ನಡೆಯುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರವು ತನ್ನ ವಿರುದ್ಧ ಇರುವವರನ್ನು ಹಣಿಯುವ ಕೆಲಸ ಮಾಡುತ್ತಿದೆ. ಸುಳ್ಳು ಕೇಸ್ ಸೃಷ್ಟಿಸಿ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲ. ಅರವಿಂದ್ ಕೇಜ್ರಿವಾಲ್, ಚಂದ್ರಬಾಬು ನಾಯ್ಡು ವಿಚಾರದಲ್ಲೂ ಹೀಗೆ ಮಾಡಿದ್ದರು. ಸಿಬಿಐ ಸೇರಿ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟಿದ್ದಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯಲ್ಲ ಎಂದು ಭವಿಷ್ಯವಾಣಿ ನುಡಿಯಲು ಇವರು ಯಾರು? ನಮ್ಮ ತಂದೆಯವರು ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದರು.
ಸಿಎಂ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಯಾರು ಅಂತ ಗೊತ್ತಿಲ್ಲ. ತಂದೆ ವಿರುದ್ಧ ದೂರು ದಾಖಲಿಸಿದ ಮೇಲೆ ತಿಳಿಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಅವರ ತಂದೆ ಎಚ್.ಡಿ.ಕುಮಾರಸ್ವಾಮಿಯೇ ಕಾರಣ. ಗೆಲ್ಲುವ ವಿಶ್ವಾಸ ಇಲ್ಲದಿದ್ದರೂ ಚುನಾವಣೆಗೆ ನಿಲ್ಲಿಸಿದರು, ನಿಖಿಲ್ ಅವರನ್ನು ಬಲಿಪಶು ಮಾಡಿದರು. ನಾನು ವರುಣಕ್ಕೆ ಸುಮ್ಮನೆ ಬರಲಿಲ್ಲ. ಸುಮಾರು ಎರಡು ಅವಧಿಯವರೆಗೆ ಕ್ಷೇತ್ರದಲ್ಲಿ ಓಡಾಡಿ ಜನರ ಪ್ರೀತಿ ಗಳಿಸಿದೆ. ಜನರು ಆ ಕಾರಣಕ್ಕೆ ನಮ್ಮನ್ನು ಸ್ವೀಕರಿಸಿದರು ಎಂದು ಹೇಳಿದರು.