ಜಿಲ್ಲೆ

ಮುಡಾ ಪ್ರಕರಣ: ವಿಚಾರಣೆಗೆ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಹಾಜರು

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕರಾದ ಎಸ್.ಎ.ರಾಮದಾಸ್ ಮತ್ತು ಎಲ್.ನಾಗೇಂದ್ರ ಗುರುವಾರ ಲೋಕಾಯುಕ್ತ ವಿಚಾರಣೆಗೆ ಹಾಜರಾದರು.

ಮುಡಾ 50:50 ಅನುಪಾತದಡಿ ನಿವೇಶನ ಹಂಚಿಕೆ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ಎದುರಿಸಿದರು.

ಎಸ್.ಎ.ರಾಮದಾಸ್ ಅವರು ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ವಿಚಾರಣೆಗೆ ಒಳಗಾದರು. ಸಂಜೆ 5ಕ್ಕೆ ಆಗಮಿಸಿದ ಎಲ್.ನಾಗೇಂದ್ರ ಅವರ ವಿಚಾರಣೆ 5.45ಕ್ಕೆ ಕೊನೆಗೊಂಡಿತು.

ಮುಡಾ ಪ್ರಕರಣ ಕುರಿತು ಈವರೆಗೂ ಪ್ರತಿಕ್ರಿಯೆ ನೀಡದ ರಾಮದಾಸ್ ಮಾಧ್ಯಮದವರಿಗೆ ಮಾಹಿತಿ ನೀಡದೆ ಅಲ್ಲಿಂದ ನಿರ್ಗಮಿಸಿದರು. ಎಲ್.ನಾಗೇಂದ್ರ ಅವರು ಜ.3 ರಂದು ಲೋಕಾಯುಕ್ತ ವಿಚಾರಣೆ ಕುರಿತು ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿ ಅಲ್ಲಿಂದ ತೆರಳಿದರು.