ಜಿಲ್ಲೆ

ಮುಡಾ ಪ್ರಕರಣ: ಲೋಕಾಯುಕ್ತರಿಂದ ಹೈಕೋರ್ಟ್‌ಗೆ ಮಧ್ಯಂತರ ವರದಿ ಸಲ್ಲಿಕೆ ಸಾಧ್ಯತೆ

ಮೈಸೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ಕುರಿತು ತನಿಖೆ ನಡೆಸಿರುವ ಲೋಕಾಯಕ್ತ ಪೊಲೀಸರು ಮಧ್ಯಂತರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ.

ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ನೇತೃತ್ವದ ತಂಡವು ಕೈಗೊಂಡಿರುವ ತನಿಖೆ ಪ್ರಗತಿಯಲ್ಲಿದ್ದು, ಈ ನಡುವೆಯೇ ಮಧ್ಯಂತರ ವರದಿ ಸಿದ್ಧಪಡಿಸಿದೆ. ಸುಮಾರು 400 ಪುಟಗಳ ವರದಿಯನ್ನು ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ಸೋಮವಾರವೇ ಬೆಂಗಳೂರಿಗೆ ತೆಗೆದುಕೊಂಡು ಹೋಗಿ, ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಸಲ್ಲಿಸಿದ್ದು, ಅವರು ಜ.26ರಂದು ಹೈಕೋರ್ಟ್‌ಗೆ ನೀಡುವ ಸಾಧ್ಯತೆ ಇದೆ.

ಪ್ರಕರಣದ ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವರ ಪತ್ನಿ ಬಿ.ಎನ್.ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಜಮೀನು ಮಾಲೀಕ ದೇವರಾಜು ಅವರನ್ನು ಲೋಕಾಯುಕ್ತ ಪೊಲೀಸರು ಈಗಾಗಲೇ ವಿಚಾರಣೆ ಮಾಡಿದೆ. ಕೆಲವು ಅಧಿಕಾರಿಗಳು, ನಿವೃತ್ತ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಆಧರಿಸಿ ವರದಿ ತಯಾರು ಮಾಡಿದ್ದಾರೆ.

ತನಿಖೆ ಮೇಲೆ ಸರ್ಕಾರ ಪ್ರಭಾವ ಸಾಧ್ಯತೆ

ಮುಡಾ ಪ್ರಕರಣವನ್ನು ರಾಜ್ಯ ಸರ್ಕಾರ ಲೋಕಾಯುಕ್ತ ತನಿಖೆಗೆ ವಹಿಸಿದೆ. ಆದರೆ ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ತನಿಖೆ ಮೇಲೆ ರಾಜ್ಯ ಸರ್ಕಾರ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೀಗಾಗಿ ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಅನುಮಾನ. ಇದೇ ಕಾರಣದಿಂದ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಆದೇಶಿಸುವ ವಿಶ್ವಾಸ ಇದೆ ಎಂದರು.

ಜಿಟಿಡಿ ಬಹಿರಂಗ ಚರ್ಚೆಗೆ ಬರಲಿ: -ಸ್ನೇಹಮಯಿ ಸವಾಲು

ಶಾಸಕ ಜಿ.ಟಿ.ದೇವೇಗೌಡರು ಬಹಿರಂಗ ಚರ್ಚೆಗೆ ಬರಲಿ ಎಂದು ಸ್ನೇಹಮಯಿ ಕೃಷ್ಣ ಸವಾಲು ಹಾಕಿದರು.

ಜಿ.ಟಿ.ದೇವೇಗೌಡರ ಸಹೋದರಿ ಪುತ್ರನಿಗೆ ಸೈಟ್‌ಗಳನ್ನು ನೀಡಲಾಗಿದೆ. ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಸೈಟ್ ಹಂಚಿಕೆ ಮಾಡಿ ಬೇರೆಯವರು ಸ್ವಾಧೀನದಲ್ಲಿದ್ದರೂ ಕೃಷಿ ಭೂಮಿ ನೋಂದಣಿ ಹೇಗೆ ಮಾಡಿಕೊಂಡಿದ್ದೀರಿ? ನಿಮ್ಮ ಅಳಿಯನ ಹೆಸರಿಗೆ ಭೂಮಿ ಹೇಗೆ ಬಂತು? ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಅಂತಹದರಲ್ಲಿ ನೀವ್ಯಾಕೆ ಸಣ್ಣವರಾಗ್ತೀರಿ. ಸೈಟ್ ಅಕ್ರಮ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಹೇಳಿದರು.

ಆ ಸೈಟ್‌ಗಳು ಅಕ್ರಮ ಎಂದು ನಾನು ಸಾಬೀತುಪಡಿಸುವೆ. ನಿಯಮಬಾಹಿರ ಅಂತ ಸರ್ಕಾರವೇ ಹೇಳಿದೆ. ಜಿ.ಟಿ.ದೇವೇಗೌಡರಿಗೆ ಆತ್ಮಸಾಕ್ಷಿ ಇದ್ದರೆ ವಾಪಸ್ ನೀಡಲಿ. ಕೇವಲ ಅವರ ಅಳಿಯ ಮಾತ್ರವಲ್ಲ ಮಗಳು, ಮಗ ಎಲ್ಲರ ಹೆಸರಲ್ಲಿಯೂ ಸೈಟ್‌ಗಳಿವೆ ಎಂದು ದೂರಿದರು.