ಚಾಮರಾಜನಗರ: ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಯುದ್ಧದ ಭೀತಿಯಲ್ಲಿ ಹಲವಾರು ಮುಗ್ಧ ನಾಗರೀಕರ ಸಾವು-ನೋವುಗಳು ಆತಂಕವನ್ನು ಉಂಟುಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದ ನಿರ್ಣಯಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಮರಿಯಾಲ ಮಠದ ಪೀಠಾಧ್ಯಕ್ಷ ಶ್ರೀಮುರುಘಾ ರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಮಠಗಳ ಮಠಾಧೀಶರ ಸುದ್ದಿಗೋಷ್ಠಿಯ ನೇತೃತ್ವವಹಿಸಿ ಮಾತನಾಡಿದರು.
ಜಗತ್ತಿನಲ್ಲೇ ಭಾರತ ಶಾಂತಿ ಪ್ರಿಯವಾದ ದೇಶವಾಗಿದೆ. ಆದರೆ ನಮ್ಮ ದೇಶದ ಮುಗ್ಧ ಪ್ರವಾಸಿಗರ ಮೇಲೆ ಪಾಕಿಸ್ತಾನದಿಂದ ಬಂದ ಉಗ್ರರು ಗುಂಡಿನ ದಾಳಿನಡೆಸುವ ಮೂಲಕ 25 ಕ್ಕಿಂತಲೂ ಹೆಚ್ಚಿನ ಜನರ ಸಾವಿಗೆ ಕಾರಣರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ 3-4 ದಿನಗಳಿಂದ ನಡೆಯುತ್ತಿರುವ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅನೇಕ ಮುಗ್ಧರು ಹಾಗೂ ಸೈನಿಕರು ಈ ವೇಳೆ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಕದನವಿರಾಮವನ್ನು ೋಷಣೆ ಮಾಡಿದರು, ಪಾಕಿಸ್ತಾನ ಗುಂಡಿನ ದಾಳಿ ಮಾಡಿರುವ ಕುರಿತು ವರದಿಗಳು ಬಂದಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರಮೋದಿ ಮತ್ತು ಸಮಸ್ತ ಸೈನಿಕರ ಪರವಾಗಿ ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ಶ್ರೀಸಿದ್ದಮಲ್ಲೇಶ್ವರ ಮಠದ ಪೀಠಾಧ್ಯಕ್ಷ ಶ್ರೀಚನ್ನಬಸವಸ್ವಾಮೀಜಿ ಮಾತನಾಡಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಭವಿಸಿರುವ ಯುದ್ಧದ ವಾತಾವರಣದಿಂದಾಗಿ ಅನೇಕ ಮುಗ್ಧ ಜನರ ಪ್ರಾಣಕ್ಕೆ ಹಾನಿಯಾಗಿದೆ. ಪಾಕಿಸ್ತಾನ ಮತ್ತು ಭಾರತ ಎರಡು ದೇಶದಲ್ಲೂ ಮುಗ್ಧ ಜನರು ಇದ್ದಾರೆ. ಆದರೆ ರೋಗಗ್ರಸ್ತ ಮನಸ್ಥಿತಿಯ ಉಗ್ರರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಧರ್ಮ ಮತ್ತು ಇನ್ನಿತರೆ ವಿಷಯದಲ್ಲಿ ಮುಗ್ಧ ಜನರನ್ನು ಹತ್ಯೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು .
ಗೋಷ್ಠಿಯಲ್ಲಿ ಹಂಡರಕಳ್ಳಿ ಸೂರ್ಯ ಸಿಂಹಾಸನ ಮಠದ ಶ್ರೀಪಂಚಾಕ್ಷರಿ ಸ್ವಾಮೀಜಿ, ಉಗನೇದಹುಂಡಿ ಮಠದ ಶ್ರೀಗುರುಸಿದ್ಧ ಸ್ವಾಮೀಜಿ, ಕೊತ್ತಲವಾಡಿ ಮಠದ ಶ್ರೀಗುರುಸ್ವಾಮಿ, ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್, ನಟರಾಜ್, ಕುಮಾರ್ ಹಾಜರಿದ್ದರು.
ಸಂಸತ್ತಿನಲ್ಲಿ ಬಸವಜಯಂತಿ:
ಪ್ರಧಾನಿ ನರೇಂದ್ರಮೋದಿ ಅವರಿಗೆ 12ನೇ ಶತಮಾನದ ಶರಣ ಶ್ರೀಬಸವೇಶ್ವರರ ಕುರಿತು ಅಪಾರವಾದ ಗೌರವ ಮತ್ತು ಪ್ರೀತಿಯಿದ್ದು, ಅದರಂತೆ ಈ ಬಾರಿ ಸಂಸತ್ತಿನಲ್ಲಿ ಬಸವಣ್ಣನವರ ಜಯಂತಿ ಆಚರಣೆ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಶ್ರೀಮುರುಘಾ ರಾಜೇಂದ್ರ ಸ್ವಾಮೀಜಿ ಹೇಳಿದರು. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಬಸವಣ್ಣವರ ಮೂರ್ತಿ ಮತ್ತು ವಚನಗಳನ್ನು ಕೆತ್ತನೆ ಮಾಡುವ ಮೂಲಕ ಬಸವಣ್ಣನವರ ಆದರ್ಶಗಳನ್ನು ಜೀವಂತ ಇರಿಸುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರ ಪಾತ್ರ ಪ್ರಧಾನವಾಗಿದೆ. ಈ ಕಾರಣಕ್ಕೆ ರಾಜ್ಯದ ಮಠಾಧೀಶರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.