ಶಿರಸಿ: ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಆದೇಶ ಪಾಲನೆ ಉದ್ದೇಶದಿಂದ ಸ್ಥಳೀಯ ಆಡಳಿತ ಮನೆಮನೆಗೆ ಅಗತ್ಯ ಸಾಮಗ್ರಿ ಪೂರೈಕೆ ಜವಾಬ್ದಾರಿ ವಹಿಸಿಕೊಂಡಿದ್ದು, ಆರಂಭಿಕ ಹಂತದಲ್ಲೇ ಮುಗ್ಗರಿಸಿದೆ.
ನಗರಪ್ರದೇಶ ಸೇರಿ ಗ್ರಾಮೀಣ ಭಾಗಗಳಿಗೂ ಅಗತ್ಯ ವಸ್ತುಗಳನ್ನು ಕೆಲ ಅನುಮತಿ ಪಡೆದ ಅಂಗಡಿಕಾರರು, ಪೂರೈಕೆದಾರರಿಂದ ಪೂರೈಸುವ ಜವಾಬ್ದಾರಿಯನ್ನು ಅಧಿಕಾರಿ ವರ್ಗ ಹೊತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರವೇ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಗತ್ಯ ವಸ್ತುಗಳ ಅಂಗಡಿಗಳು, ಸೂಪರ್ ಮಾರ್ಕೆಟ್ಗಳನ್ನು ಪೊಲೀಸ್ ಬಲಪ್ರಯೋಗದಿಂದ ಸ್ಥಗಿತ ಮಾಡಲಾಗಿದೆ. ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆದಾರರ ನೇಮಕವಾಗಿದೆ. ಆದರೆ, ವಾರ್ಡ್ವಾರು ಪೂರೈಕೆದಾರರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಅವರ ದೂರವಾಣಿ ನಂಬರ್ಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ನೀಡಲಾಗಿದ್ದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ನಮ್ಮಲ್ಲಿಯೇ ವಸ್ತುಗಳ ಕೊರತೆಯಿದೆ. ಪೂರೈಕೆಯಾದ ನಂತರ ವಿತರಿಸಲು ಕ್ರಮವಹಿಸುತ್ತೇವೆ ಎಂಬುದು ವ್ಯಾಪಾರಿಗಳ ಮಾತು. ಹೀಗಾಗಿ ಮನೆಯಲ್ಲಿ ಅಗತ್ಯ ವಸ್ತುಗಳಿಲ್ಲದೇ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಗ್ರಾಮೀಣ ಭಾಗಕ್ಕೆ ಕೆಲ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದರೂ ಸಾಮಾನ್ಯ ಜನರಿಗೆ ಅದರ ಮಾಹಿತಿ ರವಾನೆಯಾಗಿಲ್ಲ. ಹೀಗಾಗಿ ಶುಕ್ರವಾರ ನಗರ ಬಂದ್ ಇದ್ದರೂ ದಿನಸಿ ಖರೀದಿಯ ಉದ್ದೇಶದಿಂದ ನಗರಗಳತ್ತ ಗ್ರಾಮೀಣ ಜನರು ಮುಖ ಮಾಡುತ್ತಿರುವುದು ಕಂಡು ಬಂದಿದೆ.
ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳು, ದಿನಸಿ ಸಾಮಗ್ರಿಗಳ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಮನೆಯಲ್ಲಿ ಅಕ್ಕಿ ಖಾಲಿಯಾಗಿದೆ ಎಂದು ತಾಲೂಕಾಡಳಿತವು ಸೂಚಿಸಿದ ದೂರವಾಣಿಗೆ ಕರೆ ಮಾಡಿದರೆ ಪೂರೈಕೆ ಮಾಡಲು ಅಗತ್ಯ ವಸ್ತುಗಳಿಲ್ಲ ಎಂಬ ಉತ್ತರ ಕೇಳಿ ಬರುತ್ತಿದೆ. ಊಟಕ್ಕೂ ತತ್ವಾರ ಮಾಡಲಾಗುತ್ತಿದೆ. ಆಡಳಿತದಲ್ಲಿರುವವರು ದಿನಸಿ ಅಂಗಡಿ ಸ್ಥಗಿತಗೊಳಿಸಿದ್ದು ಸರಿ. ಆದರೆ, ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಳಂಬ ಮಾಡಬಾರದು.| ಭಾಗೀರಥಿ ಜೋಶಿ 15ನೇ ವಾರ್ಡ್ ನಿವಾಸಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮನೆಗೆ ದಿನಸಿ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಮಾಡುವ ವ್ಯವಸ್ಥೆಗಾಗಿ ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಲಾಗಿದೆ. ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅಧಿಕಾರಿಗಳು ಈ ವ್ಯವಸ್ಥೆ ಕಲ್ಪಿಸಬೇಕು. ಜನರು ದಿನಸಿಗಾಗಿ ಬೀದಿಗೆ ಬಂದರೆ ಅಧಿಕಾರಿಗಳೇ ಜವಾಬ್ದಾರರು. | ಕೆ. ಹರೀಶ ಕುಮಾರ ಜಿಲ್ಲಾಧಿಕಾರಿ