ಬಾಳೆಹೊನ್ನೂರು ಸಮೀಪದ ಕುಂಬತ್ತಿ ಗ್ರಾಮದ ಪ್ರಗತಿಪರ ಕೃಷಿಕರಾದ ಸುಶೀಲಮ್ಮ ಅವರ ಕುಟುಂಬದಲ್ಲಿ ಗೋಪೂಜೆ ನೆರವೇರಿಸಿ ಗೋಗ್ರಾಸ ನೀಡಿದರು. 
ಜಿಲ್ಲೆ

ಮುಗಿಲು ಮುಟ್ಟಿದ ದೀಪೋಳಿಗೆ ಘೋಷಣೆ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಹೋಬಳಿಯಾದ್ಯಂತ ಶನಿವಾರ ರೈತರು ಸಂಭ್ರಮದಿಂದ ಬಲಿಪಾಡ್ಯಮಿ, ಗೋಪೂಜೆ ಆಚರಿಸಿದರು. ಬೆಳಗ್ಗೆ ರೈತರು ಗೋವುಗಳಿಗೆ ಸ್ನಾನ ಮಾಡಿಸಿ, ಅವುಗಳಿಗೆ ಹೂ ಮಾಲೆ, ವಿವಿಧ ಫಲಗಳನ್ನು ಮಾಲೆ ಮಾಡಿ ಹಾಕಿ ಮೈ ತುಂಬ ಹಂಡಹುಂಡದ ಬಣ್ಣದ ಚಿತ್ತಾರ ಬರೆದು ಶೃಂಗರಿಸಿ ಪೂಜಿಸಿದರು. ಗೋಕೊಟ್ಟಿಗೆಗಳನ್ನು ತಳಿರು ತೋರಣ, ಹೂ ಮಾಲೆಗಳಿಂದ ಅಲಂಕರಿಸಿದ್ದರು. ಗೋವುಗಳಿಗೆ ಅಡಕೆ ಕಾಯಿ, ಹಿಂಗಾರ, ಉಗಣೆಕಾಯಿ, ಪಚ್ಚೆತೆನೆ, ಏಲಕ್ಕಿ ಗೆರೆ, ಚೆಂಡು ಹೂವು, ಬಾಳೆಹಣ್ಣುಗಳ ಮಾಲೆ ಕಟ್ಟಿ ಪೂಜಿಸಿದರು. ನಂತರ ಗೋವುಗಳಿಗೆ ದೋಸೆ, ಬಾಳೆಹಣ್ಣು, ಅಕ್ಕಿ, ಬೆಲ್ಲ ಸೇರಿದಂತೆ ವಿವಿಧ ಆಹಾರಗಳನ್ನು ನೀಡಿ ಪಟಾಕಿ ಸಿಡಿಸಿ ಕೊಟ್ಟಿಗೆಯಿಂದ ಮೇಯಲು ಹೊರ ಕಳುಹಿಸಿದರು. ಸಂಜೆ ಮನೆಗೆ ವಾಪಸ್ ಬಂದ ಗೋವುಗಳನ್ನು ಕೊಟ್ಟಿಗೆ ಬಾಗಿಲಿನಲ್ಲಿ ಒನಕೆಗಳನ್ನು ಅಡ್ಡ ಇಟ್ಟು, ಓಕುಳಿ ಮಾಡಿ ಒಳಗೆ ಬರಮಾಡಿಕೊಂಡರು.

ಮನೆಗಳಲ್ಲಿ ನೇಗಿಲು, ನೊಗ, ಕತ್ತಿ, ಹಾರೆ, ಅಕ್ಕಿಮಡಕೆ, ಸೇರು, ಮೊರ ಸೇರಿದಂತೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ ಇಟ್ಟು ಅಲಂಕರಿಸಿ ಮೇಳಿಗೆ ದೇವರಿಗೆ (ಮಿಳ್ಳೆ ದೇವ್ರ) ಪೂಜೆ ಸಲ್ಲಿಸಿದರು.

ಸಂಜೆ ಗೋಧೂಳಿ ಲಗ್ನದಲ್ಲಿ ಬಲೀಂದ್ರ ಪೂಜೆ ಮೂಲಕ ಬಲಿಚಕ್ರವರ್ತಿಯನ್ನು ನೆನಪಿಸಿಕೊಳ್ಳಲಾಯಿತು. ಕತ್ತಲಾಗುತ್ತಿದ್ದಂತೆ ಮನೆಯ ಮುಂಭಾಗದ ತುಳಸಿ ಕಟ್ಟೆಯಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸಿ ಬಳಿಕ ಕೃಷಿ ಜಮೀನು, ತೋಟ, ಗದ್ದೆ ಹಾಗೂ ಮನೆಗಳ ಮುಂಭಾಗದಲ್ಲಿ ಹಣತೆಗಳನ್ನು ಹಚ್ಚಿದರು. ದೂಪದ ಕೋಲಿನಿಂದ ದೂಪಾರತಿ ಮಾಡಿದರು. ದೀಪ ಹಚ್ಚುವ ಸಂದರ್ಭದಲ್ಲಿ ಮನೆ ದೇವರು, ಗ್ರಾಮ ದೇವರು, ಇಷ್ಟ ದೇವರು ಸೇರಿದಂತೆ ವಿವಿಧ ದೇವರ ಹೆಸರು ಹೇಳುತ್ತ ದೀಪೋಳಿಗೆ ಎಂದು ಕೂಗಿ ಸಂಭ್ರಮಿಸಿದರು. ಶನಿವಾರವೂ ವಿವಿಧೆಡೆ ಅಂಗಡಿ ಮುಂಗಟ್ಟುಗಳಲ್ಲಿ ಧನಲಕ್ಷ್ಮೀ ಪೂಜೆ, ದೇವಾಲಯಗಳಲ್ಲಿ ವಾಹನ ಪೂಜೆ ನಡೆಯಿತು.

ಭಾನುವಾರ ಕರಿ-ಸಿರಿ ಹಬ್ಬ, ಭಗಿನೀ ಗೃಹೇ ಭೋಜನಂ, ಸೋಮವಾರ ಕದಿರು ತರುವುದು, ವರ್ಷತೊಡಕು (ವರ್ಷದಡುಗೆ) ಹಬ್ಬ ನಡೆಯಲಿದೆ.