ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಅವರ ಮೇಲಿನ ಹಲ್ಲೆ ನಡೆಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಪುರಸಭೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದವು. 
ಜಿಲ್ಲೆ

ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

Kodagu

ಕುಶಾಲನಗರ:ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಅವರ ಮೇಲೆ ಹುಣಸೂರಿನ ನಿವಾಸದಲ್ಲಿ ಶುಕ್ರವಾರ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕಾಂಗ್ರೆಸ್, ಬೈಚನಹಳ್ಳಿಯ ಗೆಳೆಯರ ಬಳಗ, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘಟನೆ ವತಿಯಿಂದ ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಪುರಸಭೆ ಕಚೇರಿವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕು. ಸರ್ಕಾರಿ ಅಧಿಕಾರಿಗಳು ಕುಶಾಲನಗರದಲ್ಲಿ ಕೆಲಸ ನಿರ್ವಹಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಶಾಸಕರು, ಪೊಲೀಸರು ನೈತಿಕ ಬೆಂಬಲ ಸೂಚಿಸಬೇಕೆಂದು ಕಾಂಗ್ರೆಸ್ ನಗರಾಧ್ಯಕ್ಷ ಪ್ರಮೋದ್ ಮುತ್ತಪ್ಪ ಆಗ್ರಹಿಸಿದರು.

ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಅಶೋಕಕುಮಾರ್ ಮಾತನಾಡಿ, ರಿಯಲ್ ಎಸ್ಟೇಟ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಯಾಗಿ ಗುಂಡಾವರ್ತನೆ ತೋರುವವರನ್ನು ವಜಾಗೊಳಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಮಾಜಿ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೊನ್ಸ್, ನವೀನ್, ಪ್ರಕಾಶ್, ಪುರಸಭೆ ಸದಸ್ಯರಾದ ಜಯಲಕ್ಷ್ಮಮ್ಮ, ಎಂ.ಕೆ.ದಿನೇಶ್, ಜಗದೀಶ್, ಚಂದನ್‌ಕುಮಾರ್, ಚಂದ್ರು, ಆದಂ ಇತರರು ಇದ್ದರು.

ಕಚೇರಿಯಲ್ಲಿ ಕೆಲಸ ನಿರ್ವಹಿಸುವಾಗ ರಕ್ಷಣೆಗಾಗಿ ಹೆಲ್ಮೆಟ್ ಧರಿಸುವಂತೆ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಅವರಿಗೆ ಪ್ರತಿಭಟನಾಕಾರರು ಹೆಲ್ಮೆಟ್ ನೀಡಿದರು. ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಮತ್ತು ಕಚೇರಿ ಸಿಬ್ಬಂದಿ ಸೋಮವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.