ಅಥಣಿ: ಪಟ್ಟಣ ಹೃದಯ ಭಾಗದ ಗಚ್ಚಿನಮಠ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ದಾರಿಹೋಕರು ದುರ್ನಾತದಿಂದ ಬೇಸತ್ತಿದ್ದಾರೆ. ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ಇಷ್ಟು ಮಾತ್ರವಲ್ಲದೆ ಬೀದಿ ನಾಯಿ, ಹಂದಿಗಳು ಕಸವನ್ನು ಎಳೆದಾಡುವುದರಿಂದ ರಸ್ತೆ ತುಂಬೆಲ್ಲ ಹರಡುತ್ತಿದೆ. ಸ್ಥಳೀಯ ನಿವಾಸಿಗಳು ಹಾಗೂ ಹೋಟೆಲ್‌ನವರು ಕಸವನ್ನು ರಸ್ತೆಗೆ ಸುರಿಯತ್ತಿದ್ದು, ತ್ಯಾಜ್ಯ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ದೇವಸ್ಥಾನಕ್ಕೆ ಹೋಗುವವರಿಗೆ ತೊಂದರೆ: ಪವಿತ್ರ ಗಚ್ಚಿನಮಠಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ಬೆಳಗ್ಗೆ ಪೂಜೆಗೆಂದು ಬರುವ ಜನರಿಗೆ ಮೊದಲು ಕಸದ ರಾಶಿಯ ದರ್ಶನವಾಗುತ್ತದೆ. ಹೀಗಾಗಿ, ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರಾವಣ ಮಾಸದ ನಿಮಿತ್ತ ಪೂಜೆಗೆ ಬಂದ ಸ್ಥಳೀಯ ಹಾಗೂ ದೂರದ ಭಕ್ತರು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಈ ಸಂಬಂಧ ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದುರ್ನಾತದಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ನಿವಾಸಿಗಳನ್ನು ಕಾಡುತ್ತಿದೆ. ತ್ಯಾಜ್ಯ ವಿಲೇವಾರಿ ವಾಹನ ನಿತ್ಯ ಈ ರಸ್ತೆಯಲ್ಲೇ ಸಂಚರಿಸುತ್ತದಾರೂ ಪೌರ ಕಾರ್ಮಿಕರು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಪುರಸಭೆಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಚುನಾಯಿತ ಪ್ರತಿನಿಧಿಗಳಿಲ್ಲ: ಒಂಬತ್ತು ವರ್ಷಗಳಿಂದ ಅಥಣಿ ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಇರುವುದು ಅಭಿವೃದ್ಧಿ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ವಾರ್ಡ್ ವಿಂಗಡಣೆ, ಮೀಸಲಾತಿ ಸೇರಿ ವಿವಿಧ ಕಾರಣಗಳಿಗೆ ಪುರಸಭೆ ವಿಚಾರ ನ್ಯಾಯಾಲಯ ಮೆಟ್ಟಿಲೇರಿದ್ದು ಜನಪ್ರತಿನಿಧಿಗಳು ಇಲ್ಲವಾಗಿದ್ದಾರೆ. ಹೀಗಾಗಿ, ಯಾವುದೇ ಕೆಲಸವಾಗಬೇಕಿದ್ದರೂ ಅಧಿಕಾರಿಯನ್ನೇ ಸಂಪರ್ಕಿಸಬೇಕು. ಈ ಪರಿಣಾಮ ಪಟ್ಟಣದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಆಗಸ್ಟ್ 15, ಜನವರಿ 26 ಹಾಗೂ ನವೆಂಬರ್ 1 ರಂದು ಮಾತ್ರ ಕ್ರಿಮಿನಾಶಕ ದ್ರಾವಣ ಸಿಂಪಡಿಸಲಾಗುತ್ತದೆ. ರಾಷ್ಟ್ರೀಯ ಹಬ್ಬಗಳಂದು ಮಾತ್ರ ಸೊಳ್ಳೆ ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆ ಹರಡುತ್ತದೆ. ಉಳಿದ ದಿನಗಳಲ್ಲಿ ಏನೂ ಆಗುವುದಿಲ್ಲ ಎಂದು ಪುರಸಭೆ ಭಾವಿಸಿದಂತಿದೆ. ಅಧಿಕಾರಿಗಳ ನಿರ್ಲಕ್ಷೃ ಧೋರಣೆ ಒಳ್ಳೆಯದಲ್ಲ ಎಂದು ಸ್ಥಳೀಯ ನಿವಾಸಿ ಅವಿನಾಶ ಶಿಂಧೆ ದೂರಿದ್ದಾರೆ.
ಪ್ರತಿದಿನ ಎಲ್ಲ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಸ್ವಚ್ಛತೆಗೆ ಸಾರ್ವಜನಿಕರೂ ಸಹಕರಿಸಬೇಕಾಗುತ್ತದೆ. ರಸ್ತೆಯ ಎಲ್ಲೆಂದರಲ್ಲಿ ಕಸ ಸುರಿಯುವುದರಿಂದ ಪಟ್ಟಣದ ಸೌಂದರ್ಯ ಹಾಳಾಗುತ್ತದೆ. ಮನೆ ಎದುರು ಬರುವ ವಾಹನಕ್ಕೆ ತ್ಯಾಜ್ಯ ಸುರಿದರೆ ಈ ಸಮಸ್ಯೆ ಆಗುವುದಿಲ್ಲ. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿರುವ ಕಸ ತೆರವುಗೊಳಿಸಲಾಗುವುದು.| ಈರಣ್ಣ ದಡ್ಡಿ ಪುರಸಭೆ ಮುಖ್ಯಾಧಿಕಾರಿ ಅಥಣಿಗಚ್ಚಿನಮಠ, ಸಿದ್ದೇಶ್ವರ, ಮೋಟಗಿಮಠ ಹಾಗೂ ಶೆಟ್ಟರ ಮಠಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಇಲ್ಲಿ ನಿತ್ಯ ಕಸ ನಿತ್ಯ ಬೀಳುತ್ತದೆ. ಪುರಸಭೆ ಇಷ್ಟೊಂದು ನಿರ್ಲಕ್ಷೃ ವಹಿಸಿದರೆ ಜನರಿಗಾಗುವ ತೊಂದರೆ ತಪ್ಪುವುದಿಲ್ಲ.| ವಿದ್ಯಾಧರ ಬಳೊಳ್ಳಿ ಪಟ್ಟಣ ನಿವಾಸಿ