ಜಿಲ್ಲೆ

ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭ

ಆಲೂರು : ಪಟ್ಟಣದಲ್ಲಿರುವ ದ್ವಿಮುಖ ರಸ್ತೆಗೆ ಮರು  ಡಾಂಬರೀಕರಣ ಕಾಮಗಾರಿ ಆರಂಭವಾಗಿದ್ದು ನಗರೋತ್ಥಾನ ಯೋಜನೆಯ ಸುಮಾರು 35 ಲಕ್ಷ ರೂಗಳ ವೆಚ್ಚದಲ್ಲಿ 900 ಮೀಟರ್  ಉದ್ದಕ್ಕೂ ಡಾಂಬರೀಕರಣ ಮಾಡಲಾಗುತ್ತಿದೆ ಸಾರ್ವಜನಿಕರು ಕಾಮಗಾರಿಗೆ ಸಹಕರಿಸಬೇಕೆಂದು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ನಟರಾಜ್ ತಿಳಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯ ರಸ್ತೆಯ ಅಂಚಿನಲ್ಲಿದ್ದ ಚರಂಡಿಗಳಲ್ಲಿ ತುಂಬಿದ್ದ ಹೂಳನ್ನು ತೆಗೆದು, ಡಾಂಬರು ಅಂಚಿನಿಂದ ಚರಂಡಿವರೆಗೆ 2 ಮೀ. ಅಗಲ ಇಂಟರ್‌ಲಾಕ್ ಹಾಕಲಾಗುವುದು ಇದರಿಂದ ರಸ್ತೆ ಮೇಲೆ ಬಿದ್ದ ನೀರು ಸರಾಗವಾಗಿ ಚರಂಡಿಗೆ ಹರಿಯಲು ಅನುಕೂಲವಾಗುತ್ತದೆ. ಕೊನೆ ಪೇಟೆಯಿಂದ ಬಸ್ ನಿಲ್ದಾಣದವರೆಗೆ ಡಾಂಬರೀಕರಣ ಮಾಡಲಾಗುತ್ತದೆ.

ರಸ್ತೆ ಬದಿಯಲ್ಲಿರುವ ಅಂಗಡಿ, ಮನೆ ನಿವಾಸಿಗಳು ಮುಂಭಾಗದಲ್ಲಿರುವ ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚದೆ ತಿರುಗಾಡಲು ಹಾಸುಕಲ್ಲನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಪ. ಪಂ. ಇಂಜಿನಿಯರ್ ಕವಿತಾ ಮಾತನಾಡಿ, ಇತ್ತಿಚೆಗೆ ಸುರಿದ ಮಳೆ ನೀರು ರಸ್ತೆಯಿಂದ ಚರಂಡಿಗೆ ಹರಿಯದೆ ಅಲ್ಲಲ್ಲಿ ನಿಂತು ರಸ್ತೆಯಲ್ಲಿ ಗುಂಡಿಗಳಾಗಿ ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು. ಚರಂಡಿಗಳಲ್ಲಿ ಹೂಳು ತುಂಬಿತ್ತು. ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಮರು ಡಾಂಬರೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶ ಎಕ್ಸಿಕ್ಯುಟೀವ್ ಇಂಜಿನಿಯರ್ ಶಿವಪ್ರಕಾಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನೀಲ್, ಪ. ಪಂ. ಮುಖ್ಯಾಧಿಕಾರಿ ನಟರಾಜ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.