ಕುರುಗೋಡು: ಕಾಶ್ಮೀರ ರಕ್ಷಣೆ ಮಾಡಿದ ಕೀರ್ತಿ ಜನಸಂಘದ ಪ್ರಮುಖ ಶ್ಯಾಮಾಪ್ರಸಾದ್ ಮುಖರ್ಜಿ ಅವರಿಗೆ ಸಲ್ಲುತ್ತದೆ. ಮುಖರ್ಜಿ ಅವರ ಬದುಕು ಅನುಕರಣೀಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಕೊರ್ಲಗುಂದಿ ಗ್ರಾಮದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಶ್ಯಾಮಾಪ್ರಸಾದ್ ಮುಖರ್ಜಿ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶ, ಸಾಮಾಜಿಕ ಕಳಕಳಿ ನಮಗೆ ಪ್ರೇರಣೆಯಾಗಬೇಕು ಎಂದರು.
ಸಂವಿಧಾನದ 370ನೇ ವಿಧಿ ಧಿಕ್ಕರಿಸಿ 1950ರಲ್ಲಿ ಕಾಶ್ಮೀರ ಪ್ರವೇಶ ಮಾಡಿದ್ದಕ್ಕೆ ಅಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ಶ್ಯಾಮಾ ಪ್ರಸಾದ್ ಮುಖರ್ಜಿ ಅವರನ್ನು ಗೃಹಬಂಧನಕ್ಕೆ ಒಳಪಡಿಸಿತು. ದೇಶದ ಪ್ರಗತಿಗೆ ಶ್ರಮಿಸಿದ್ದ ಮುಖರ್ಜಿ ಅವರು ಯುವ ಸಮೂಹಕ್ಕೆ ರಾಷ್ಟ್ರಪ್ರೇಮದ ಪ್ರಾಮುಖ್ಯ ತಿಳಿಸಿಕೊಟ್ಟರು. ಮುಖರ್ಜಿ ಸ್ಥಾಪಿಸಿದ ಭಾರತೀಯ ಜನಸಂಘ ಪಕ್ಷವೇ ಭಾರತೀಯ ಜನತಾ ಪಕ್ಷವಾಗಿ ದೇಶದ ಸೇವೆ ಸಲ್ಲಿಸುತ್ತಿದೆ ಎಂದು ಮದಿರೆ ಕುಮಾರಸ್ವಾಮಿ ತಿಳಿಸಿದರು.