ಅರಸೀಕೆರೆ: ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಉಳಿಸಿಕೊಳ್ಳುವುದೇ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ಗುಂಡ್ಕಾನಹಳ್ಳಿ ಬಡಾವಣೆಯಲ್ಲಿ ಗುರುವಾರ ಜೆಡಿಎಸ್ ಕಚೇರಿ ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದ್ದು, ಎರಡು ವರ್ಷದಿಂದ ಅವರ ಮನೆಗೆ ಎಡತಾಕುತ್ತಿದ್ದಾರೆ. ಕೆ.ಎಂ.ಶಿವಲಿಂಗೇಗೌಡರಿಗೆ ಮೂರು ಬಾರಿ ಶಾಸನಸಭೆ ಪ್ರವೇಶಿಸಲು ಎಲ್ಲ ರೀತಿಯ ಅವಕಾಶ ಮಾಡಿಕೊಟ್ಟಿದ್ದೇವೆ. ಹೀಗಿದ್ದರೂ ಅವರು ಸಬೂಬು ನೀಡಿ ಹೊರ ಹೋಗುವ ಮಾತುಗಳನ್ನಾಡುತ್ತಿದ್ದಾರೆ. ಕ್ಷೇತ್ರದ ಆರಾಧ್ಯ ದೈವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಆಣೆಯಾಗಿ ಗೆಲ್ಲಿಸಿಕೊಂಡು ಬರುವುದಾಗಿ ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಹೊಸೂರು ಗಂಗಾಧರ್ ಸೇರಿ ಹಲವರು ವಾಗ್ದಾನ ನೀಡಿದ್ದು, ನಮ್ಮ ಜತೆಯಲ್ಲೇ ಉಳಿದುಕೊಳ್ಳಿ ಎಂದು ಕೋರಿದ್ದೇವೆ. ಆದರೆ ನಿರ್ಧಾರ ಅವರಿಗೆ ಸೇರಿದ್ದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹಿತಕಾಯಲು ಹಿಂದೇಟು ಹಾಕುವುದಿಲ್ಲ. ಫೆ.12ರ ಸಭೆ ಬಳಿಕ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಮಾತಿನಲ್ಲೇ ಚಾಟಿ ಬೀಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಕೊಡುಗೆೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಇಂಧನ ಸಚಿವನಾಗಿದ್ದ ವೇಳೆ ರೈತರಿಂದ ಕೇವಲ ಐದು ಸಾವಿರ ರೂ. ಪಡೆದು ವಿದ್ಯುತ್ ಪರಿವರ್ತಕ ನೀಡಲಾಗುತ್ತಿತ್ತು. ರಾಜ್ಯವನ್ನಾಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಪೊಳ್ಳು ಭರವಸೆ ಮೂಲಕ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಪದವಿ ಪೂರ್ವ, ಪದವಿ ಸೇರಿ ಎಲ್ಲ ಬಗೆಯ ಕಾಲೇಜುಗಳನ್ನು ತೆರೆಯಲಾಗಿದೆ. ಕೃಷಿ,ಇಂಧನ, ಲೋಕೋಪಯೋಗಿ ಸೇರಿ ಎಲ್ಲ ಇಲಾಖೆಗಳ ಅನುದಾನ ತಂದು ಜಿಲ್ಲೆಯ ಏಳಿಗೆಗೆ ಶ್ರಮಿಸಿದ್ದೇವೆ ಎಂದು ಎಚ್.ಡಿ.ರೇವಣ್ಣ ಸಮರ್ಥಿಸಿಕೊಂಡರು.
ಗುಜರಿ ಬಸ್ ಹತ್ತಿಸಲು ಕಾಂಗ್ರೆಸ್ ಹರಸಾಹಸ: ಎರಡು ವರ್ಷದಿಂದ ಜೆಲ್ಲೆಯ ಕೆಲ ಜೆಡಿಎಸ್ ಶಾಸಕರನ್ನು ಗುಜರಿ ಬಸ್ ಹತ್ತಿಸಲು ಕಾಂಗ್ರೆಸ್ ಮುಖಂಡರು ಹರಸಾಹಸಪಡುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಲೆಳೆದರು. ಕನ್ಯಾಕುಮಾರಿಯಿಂದ ಆರಂಭಗೊಂಡು ಕಾಶ್ಮೀರದಲ್ಲಿ ಮುಕ್ತಾಯಗೊಂಡಿರುವ ಕೈ ನಾಯಕರ ಅರವತ್ತು ವರ್ಷದ ಹಳೆಯ ಬಸ್ ಅನ್ನು ಗುಜರಿಗೆ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಮುಗಿಸಲು ಅವರದೇ ಪಕ್ಷದ ಕೆಲ ನಾಯಕರು ಸಂಚು ರೂಪಿಸಿದ್ದು ಏನಾಗಲಿದೆ ಕಾದು ನೋಡಿ ಎಂದು ಎಚ್.ಡಿ.ರೇವಣ್ಣ ಟಾಂಗ್ ನೀಡಿದರು.
ವಾರದಲ್ಲಿ ಎರಡು ಬಾರಿ ಭೇಟಿ: ಜೆಡಿಎಸ್ ಬಲಗೊಳಸುವ ಸಂಕಲ್ಪದೊಂದಿಗೆ ಪಕ್ಷದ ಕಚೇರಿಗೆ ಚಾಲನೆ ನೀಡಲಾಗಿದ್ದು ವಾರಕ್ಕೆ ಎರಡು ಬಾರಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಭೇಟಿ ನೀಡಲಿದ್ದಾರೆ. ಅಗತ್ಯವಿದ್ದಲ್ಲಿ ನಾನೂ ಬರಲಿದ್ದು ಯಾರೊಬ್ಬರೂ ಎದೆಗುಂದುವ ಅಗತ್ಯವಿಲ್ಲ ಎಂದು ಎಚ್.ಡಿ.ರೇವಣ್ಣ ಹೇಳಿದರು.
ಪಕ್ಷ ಉಳಿಸಲು ತಮ್ಮಯ್ಯಣ್ಣ, ಗುರುಸಿದ್ದಪ್ಪ ಕೊಡುಗೆ ಏನೆಂಬುದು ನಮಗೆ ಗೊತ್ತಿದೆ. ಮುಂದುವರಿದ ಭಾಗವಾಗಿ ಪಕ್ಷದ ಹಿರಿಯ ಮುಖಂಡ ಬಿಳಚೌಡಯ್ಯ ಅವರನ್ನು ಎರಡೂವರೆ ವರ್ಷ ಜಿಪಂ ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಯಾದವ ಸಮುದಾಯದ ಬಂಡಿಗೌಡರ ರಾಜಣ್ಣನಿಗೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಹತ್ತಾರು ಅವಕಾಶ ನೀಡಿದ್ದರೂ ಕೆಲವರು ಮರೆತಿದ್ದಾರೆ ಎಂದು ಛೇಡಿಸಿದ ರೇವಣ್ಣ, ಗುತ್ತಿಗೆದಾರರ ಬಿಲ್ ತಡೆ ಹಿಡಿಯುವುದು, ಸಾಲ ವಿತರಣೆಗೆ ಅಡ್ಡಿಪಡಿಸಲು ಹೊರಟರೆ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.
ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭಗೊಂಡಿರುವ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತದೆ. ವಾರಾಂತ್ಯಕ್ಕೆ ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ, ಹಾಸನ ಹಾಗೂ ಸಕಲೇಶಪುರ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲಿದೆ. ಫೆ.12ರಂದು ನಡೆಯುವ ಪೂರ್ವಭಾವಿ ಸಭೆಯಲ್ಲಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಶಾಸಕರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದು ಶಕ್ತಿ ಏನೆಂಬುದನ್ನು ಸಾಬೀತು ಮಾಡೋಣ ಎಂದು ಎಚ್.ಡಿ.ರೇವಣ್ಣ ಉತ್ಸಾಹ ತುಂಬಿದರು.
ಸಂಸದ ಪ್ರಜ್ವಲ್ ರೇವಣ್ಣ, ಸಹಕಾರ ಮಂಡಳದ ಅಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಕುರುಬರ ಸಂಘದ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಮಾಜಿ ಉಪಾಧ್ಯಕ್ಷೆ ಪ್ರೇಮಾ ನಿಂಗಪ್ಪ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಕೇಶವ ಮೂರ್ತಿ, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಹರಳಕಟ್ಟ ಶಶಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಶೇಖರ್ ನಾಯ್ಕ, ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ಮುಖಂಡರಾದ ಹರ್ಷವರ್ಧನ್‌ರಾಜ್,ನಗರಸಭೆ ಸದಸ್ಯರಾದ ಝಾಕಿರ್, ಈಶಣ್ಣ, ಪ್ರೇಮಾ ಮಲ್ಲಿಕಾರ್ಜುನ್, ಚಲುವನಹಳ್ಳಿ ರಾಜಣ್ಣ ಇತರರು ಇದ್ದರು.