ಶ್ರೀನಿವಾಸಪುರ: ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ತಮ್ಮ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಮುಕ್ತವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ಹೇಳಿದರು.
ತಾಲೂಕಿನ ಯಲ್ದೂರು ಹೋಬಳಿಯ ನೆರ್ನಹಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮವನ್ನು ಸುತ್ತಾಡಿ, ಗ್ರಾಮದ ಮೂಲ ಸೌಕರ್ಯಗಳ ಬಗ್ಗೆ ಸ್ಥಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಮಾತನಾಡಿದರು.
ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಇದ್ದರೆ ಸಾಂಕ್ರಮಿಕ ರೋಗಗಳು ಹರಡುತ್ತವೆ. ಆದ್ದರಿಂದ ಸ್ವಯಂಪ್ರೇರಿತವಾಗಿ ಗ್ರಾಮವನ್ನು ಸುಂದರ ಗ್ರಾಮವನ್ನಾಗಿ ಮಾಡಬೇಕು. ಒಬ್ಬರಿಗೊಬ್ಬರು ಸಹಕಾರ ನೀಡಿ ಗ್ರಾಮಾಭಿವೃದ್ಧಿಗೆ ಕೈ ಜೋಡಿಸಬೇಕು. ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಿದ್ದು 15 ದಿನಗಳ ಒಳಗೆ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಇಒ, ಪಿಡಿಒ ಅವರಿಗೆ ಸೂಚಿಸಿದರು.
ವಸತಿ ಯೋಜನೆಯಲ್ಲಿ ಕೆಲವರಿಗೆ ನಿವೇಶನಗಳನ್ನು ಸರ್ಕಾರದಿಂದ ನೀಡಲಾಗಿದ್ದು, ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಇನ್ನು ಕೆಲವು ಖಾಲಿ ನಿವೇಶಗಳಿದ್ದು ಆ ನಿವೇಶನಗಳಲ್ಲಿ ಗಿಡಗಳು ಬೆಳದಿರುವ ಕಾರಣ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಖಾಲಿ ನಿವೇಶನಗಳ ವಾರಸುದಾರರು ಮನೆ ಕೊಟ್ಟಿಕೊಳ್ಳಿ ಇಲ್ಲ ಖಾಲಿ ನಿವೇಶನವನ್ನು ಸರ್ಕಾರಕ್ಕೆ ಒಪ್ಪಿಸಿ, ನಿವೇಶನ ಹಾಗೂ ಮನೆ ಇಲ್ಲದಿರುವವರೆಗೆ ಆ ಸ್ಥಳವನ್ನು ನೀಡಿ ಅಂತಹವರಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ವಿಧವಾ ವೇತನ, ಅಂಗವಿಕಲ ವೇತನ, ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ಥಳದಲ್ಲಿಯೇ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು. ಕೆಲ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲಾಗುವುದು. ಕೆರೆ ಒತ್ತುವರಿ ತೆರೆವುಗೊಳಿಸಿ ಜಾಗ ಗುರುತಿಸುವಂತೆ, ಗ್ರಾಮದ ಸ್ಮಶಾನಕ್ಕೆ 15 ಲಕ್ಷ ರೂ. ಬಿಡುಗಡೆ ಮಾಡಿ, ಕೇಂದ್ರ ಸರ್ಕಾರದ ಜಲಜೀವನ್ ಕ್ರಿಯಾ ಯೋಜನೆಯನ್ನು ಇದೇ ಗ್ರಾಮದಿಂದಲೇ ಪ್ರಾಂಭಿಸುವಂತೆ ಇಒ ಅಧಿಕಾರಿಗೆ ಸೂಚಿಸಿದರು.
ಒಟ್ಟು 30 ಅರ್ಜಿಗಳು ಬಂದಿದ್ದು, ಅರ್ಜಿಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಗ್ರಾಮಸ್ಥರ ಬಹುತೇಕ ಬೇಡಿಕೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ, ಉಳಿದ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಭೂ ದಾಖಲೆಗಳ ಉಪನಿರ್ದೇಶಕಿ ಭಾಗ್ಯಮ್ಮ, ಡಿಎಚ್ಒ ಜಗದೀಶ್, ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮುದ್ದಣ್ಣ, ಶಿಶು ಅಭಿವೃದ್ಧಿ ಉಪನಿರ್ದೇಶಕ ಮುನಿರಾಜು, ತಹಸೀಲ್ದಾರ್ ಶರೀನ್ತಾಜ್, ಇಒ ಎಸ್.ಆನಂದ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಬಿಇಒ ಉಮಾದೇವಿ, ಟಿಎಚ್ಒ ಎಂ.ಸಿ.ವಿಜಯಮ್ಮ, ಎಡಿಎಲ್ಆರ್ ಲಿಖಿತಾ, ಎಡಿಎಲ್ಆರ್ ಇಲಾಖೆಯ ಅಧೀಕ್ಷಕ ವಿ.ನಟೇಶ್ಮೂರ್ತಿ, ಉಪತಹಸೀಲ್ದಾರ್ ಹರಿಪ್ರಸಾದ್, ಆರ್ಐ ವಿನೋದ್ಕುಮಾರ್, ಅಂಬರೀಶ್, ಮುನಿರೆಡ್ಡಿ, ಗುರುರಾಜ ರಾವ್, ರ್ಜನಾದನ್, ಹೋಬಳಿ ತೋಟಗಾರಿಕೆ ಅಧಿಕಾರಿ ಹರೀಶ್, ಸೋಮಾಯಜಲಪಲ್ಲಿ ಗ್ರಾಪಂ ಅಧ್ಯಕ್ಷೆ ವನಿತಾ, ಪಿಡಿಒ ಸುಬ್ರಮಣಿ , ಗ್ರಾಮ ಲೆಕ್ಕಾಧಿಕಾರಿಗಳಾದ ಹರಿಬಾಬು, ಮುರಳಿ, ಜಯಚಂದ್ರ, ಸಾಕಮ್ಮ, ಶಿವಾನಂದ ಇತರರಿದ್ದರು.
ರಸ್ತೆ, ಬಸ್ ಇಲ್ಲ ಸರ್: ಗ್ರಾಮಕ್ಕೆ ಬಸ್ ವ್ಯವಸ್ಥೆ ಹಾಗೂ ರಸ್ತೆ ಇಲ್ಲದಿರುವ ಬಗ್ಗೆ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಹೇಳಿದಾಗ ಕೆಎಸ್ಆರ್ಟಿಸಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, 15 ದಿನಗಳ ಒಳಗೆ ಗ್ರಾಮಕ್ಕೆ ಸಂಪರ್ಕ ರಸ್ತೆ ಕಾಮಗಾರಿ, ಹಾಗೂ ಬಸ್ವ್ಯವಸ್ಥೆ ಮಾಡುವುದಾಗಿ ಡಿಸಿ ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಕ್ಕೆ ಕ್ರಮ: ಗ್ರಾಮದ ಸಮುದಾಯ ಭವನದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿರುವುದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದಾಗ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಂಗನಾಡಿ ಕೇಂದ್ರಕ್ಕೆ ಜಾಗ ಗುರುತಿಸುವಂತೆ ಸೂಚಿಸಿ, ಮುಂದಿನ ವಾರದೊಳಗೆ ನೂತನ ಕಟ್ಟಡ ನಿಮಾರ್ಣಕ್ಕೆ ಚಾಲನೆ ನೀಡುವಂತೆ ಡಿಸಿ ವೆಂಕಟ್ರಾಜಾ ಹೇಳಿದರು.