ಜಿಲ್ಲೆ

ಮುಕ್ತ ವಿವಿಯಿಂದ 15ರಿಂದ ಆನ್‌ಲೈನ್ ಪ್ಲೇಸ್‌ಮೆಂಟ್ ಉತ್ಸವ

reportermys

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಪ್ರೊಫೈಲ್ ಇನ್ ಸಂಸ್ಥೆಯ ಸಹಯೋಗದಲ್ಲಿ ಪ್ಲೇಸ್‌ಮೆಂಟ್ ಉತ್ಸವ-2023 ಉದ್ಯೋಗ ಮೇಳವನ್ನು ಏ.15ರಿಂದ 15 ದಿನಗಳ ಕಾಲ ಆನ್‌ಲೈನ್ ಮೂಲಕ ಆಯೋಜಿಸಿದೆ.


ಇದು ಮುಕ್ತ ವಿವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದು, ಎಂಬಿಎ, ಎಂಕಾಂ ಪದವೀಧರರಿಗೆ ಹೆಚ್ಚಿನ ಅವಕಾಶಗಳಿವೆ. ಅಂದಾಜು 10 ಕಂಪನಿಗಳಿಂದ 2 ಸಾವಿರ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತಿದೆ. ವಾರ್ಷಿಕ 3 ರಿಂದ 6 ಲಕ್ಷ ರೂ. ವರೆಗೆ ಅಧಿಕ ವೇತನದ ಉದ್ಯೋಗಗಳಿವೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮೂರು ಹಂತದಲ್ಲಿ ಪ್ರಕ್ರಿಯೆ ನಡೆಯಲಿದ್ದು, ಡಿಜಿಟಲ್ ಬಯೋಡಾಟಾ ಸಿದ್ಧಪಡಿಸಲು ಅಭ್ಯರ್ಥಿಗಳಿಗೆ ಸಹಾಯ ಮಾಡುವುದು, ಕಂಪನಿಗಳಿಗೆ ಅವಶ್ಯಕವಿರುವ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆ ಮಾಡುವುದು, ಜತೆಗೆ, ಪ್ರಾಥಮಿಕ ಹಂತದ ಸಂದರ್ಶನ ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹತ್ತಿರದ ಸ್ಥಳದಲ್ಲಿ ಮುಖಾಮುಖಿ ಸಂದರ್ಶನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ವಿವಿಧ ಭಾಗದಲ್ಲಿರುವ ಮುಕ್ತ ವಿವಿ ವಿದ್ಯಾರ್ಥಿಗಳು ತಮ್ಮ ಸ್ಥಳದಿಂದಲೇ ಆನ್‌ಲೈನ್ ಮೂಲಕ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಉಚಿತ ಪ್ರವೇಶ ಇದೆ ಎಂದರು.
2021ರಲ್ಲಿ ಆನ್‌ಲೈನ್ ಮೂಲಕ ಉದ್ಯೋಗ ಮೇಳ ಮಾಡಲಾಗಿತ್ತು. ಅದರಲ್ಲಿ 2,900 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಪೈಕಿ 535 ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಮಾಹಿತಿ ನೀಡಿದರು.


ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಉದ್ದಿಮೆ ಸಂಸ್ಥೆ ಸಮನ್ವಯ ಘಟಕದ ಸಂಯೋಜಕಿ ಡಾ.ಎಚ್.ರಾಜೇಶ್ವರಿ, ಉದ್ಯೋಗ ಘಟಕದ ನಿರ್ದೇಶಕಿ ಡಾ.ಆರ್.ಎಚ್.ಪವಿತ್ರಾ, ಪ್ರೊಫೈಲ್ ಇನ್ ಸಂಸ್ಥೆಯ ವೆಂಕಟೇಶ್ ಇನ್ನಿತರರು ಇದ್ದರು.