ಗದಗ: ಮಂಗಳವಾರ ಬೆಳಗ್ಗೆ 11ಕ್ಕೆ ಆಗಮಿಸಿದ ಮುಂಬೈ-ಗದಗ ರೈಲಿನಲ್ಲಿ ದಾವಣಗೆರೆ ಮೂಲದ ಒಬ್ಬ ಬಾಣಂತಿ ಸೇರಿ ಒಟ್ಟು 114 ಪ್ರಯಾಣಿಕರು ಆಗಮಿಸಿದರು. ಇವರಲ್ಲಿ ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ 6 ಜನರನ್ನು ಆಯಾ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಕಳುಹಿಸಲಾಯಿತು. ಉಳಿದ 108 ಪ್ರಯಾಣಿಕರನ್ನು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿ ನಗರದ ಮಲ್ಲಸಮುದ್ರದ ಮುರಾರ್ಜಿ ದೇಸಾಯಿ ವಸತಿ ನಿಲಯ ಮತ್ತು ಪ್ರಯಾಣಿಕರ ಬೇಡಿಕೆ ಅನುಗುಣವಾಗಿ ಕೆಲವರನ್ನು ಸ್ಥಳೀಯ ಖಾಸಗಿ ವಸತಿ ಗೃಹಗಳಲ್ಲಿ 7 ದಿನಗಳ ಕಾಲ ಕ್ವಾರಂಟೈನ್ಗೆ ಕಳುಹಿಸಲಾಯಿತು. ಕ್ವಾರಂಟೈನ್ ಇರಿಸಲಾಗಿರುವ ಪ್ರದೇಶಕ್ಕೆ ಸೂಕ್ತ ಬಂದೋಬಸ್ತ್ ಸಹ ನಿಯೋಜಿಸಲಾಗಿದೆ.
ಕರೊನಾ ವೈರಸ್ ತವರುಮನೆ ಎನಿಸಿರುವ ಮುಂಬೈನಿಂದ ನಗರದ ರೈಲು ನಿಲ್ದಾಣದಲ್ಲಿ ಬಂದಿಳಿದ ಪ್ರತಿಯೊಬ್ಬರನ್ನೂ ಸರತಿ ಸಾಲಿನಲ್ಲಿ ನಿಲ್ಲಿಸಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ರೈಲಿನ ಮೂಲಕ ಬಂದಿರುವ ಎಲ್ಲರ ಮೇಲೂ ನಿಗಾ ವಹಿಸಿ ಜಾಗರೂಕತೆಯಿಂದ ಪರೀಕ್ಷಿಸಲಾಯಿತು. ಸೇವಾ ಸಿಂಧು ವೆಬ್ಸೈಟ್ನಲ್ಲಿ ಪ್ರಯಾಣಿಕರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಅಪ್ಲೋಡ್ ಮಾಡಿದ ಮೇಲೆಯೇ ಅವರನ್ನು ನಿಲ್ದಾಣದಿಂದ ಹೊರಗೆ ಬಿಡಲಾಯಿತು.
ಜಿಲ್ಲಾಡಳಿತವು ಪ್ರಯಾಣಿಕರನ್ನು ಕ್ವಾರಂಟೈನ್ ಪ್ರದೇಶಕ್ಕೆ ಕರೆದೊಯ್ಯಲು ನಿಲ್ದಾಣದ ಹೊರಗೆ ಐದು ಮಿನಿ ಬಸ್ಗಳನ್ನು ನಿಲ್ಲಿಸಿತ್ತು. ಖಾಸಗಿ ಕ್ವಾರಂಟೈನ್ ಮತ್ತು ಸರ್ಕಾರಿ ಕ್ವಾರಂಟೈನ್ ಪ್ರದೇಶಕ್ಕೆ ತೆರಳುವ ಬಸ್ಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ಬಸ್ ಹತ್ತಿಸಲಾಯಿತು. ಬಹುತೇಕರು ಸರ್ಕಾರಿ ಕ್ವಾರಂಟೈನ್ಗೆ ತೆರಳಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಅವರು ರೈಲು ನಿಲ್ದಾಣದಲ್ಲಿ ಮಾಡಲಾದ ಸಿದ್ಧತೆಗಳನ್ನು ಪರಿಶೀಲಿಸಿದರು. ಕರೊನಾ ಹರಡದಂತೆ ಕೈಗೊಂಡ ಕ್ರಮಗಳ ಕುರಿತು ವೀಕ್ಷಿಸಿದರು.
ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಶ್ರೀನಿವಾಸಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ ಬಸರೀಗಿಡದ, ಡಾ. ಎಸ್.ಎಸ್. ನೀಲಗುಂದ ಸೇರಿ ಅನೇಕ ಅಧಿಕಾರಿಳು, ಸಿಬ್ಬಂದಿ ಇದ್ದರು.
ಬಂದಿಳಿದ ಬಾಣಂತಿ: ಮುಂಬೈ ನಿವಾಸಿ, ದಾವಣಗೆರೆ ಮೂಲದ ಬಾಣಂತಿಯೊಬ್ಬರು ಇಬ್ಬರು ಮಕ್ಕಳು ಮತ್ತು ತಾಯಿಯೊಂದಿಗೆ ಮುಂಬೈ ರೈಲಿನಲ್ಲಿ ನಗರಕ್ಕೆ ಆಗಮಿಸಿದರು. ಇವರನ್ನು ದಾವಣಗೆರೆಯಲ್ಲಿಯೇ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಚರ್ಚೆ ನಡೆಸಿದರಲ್ಲದೆ, ಶೀಘ್ರವೇ ದಾವಣಗೆರೆ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗುವುದು ಎಂದು ತಿಳಿಸಿದರು.
ನನ್ನನ್ನು ಗಂಗಾವತಿಗೆ ಕಳಿಸಿ: ಮುಂಬೈಯಿಂದ ರೈಲಿನಲ್ಲಿ ಆಗಮಿಸಿದ ಯುವತಿಯೊಬ್ಬಳು ಕ್ವಾರಂಟೈನ್ ಆಗಲು ನಿರಾಕರಿಸಿದ ಘಟನೆ ಜರುಗಿತು. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಯುವತಿ, ‘ನಾನೊಬ್ಬಳೇ ಕ್ವಾರಂಟೈನ್ ಇರಲು ಹೇಗೆ ಸಾಧ್ಯ? ಕುಟುಂಬದವರಿದ್ದರೆ ಇರಬಹುದಿತ್ತು. ಅಲ್ಲದೆ, ಇತ್ತೀಚೆಗೆ ನನ್ನ ತಾಯಿಗೆ ಆಪರೇಷನ್ ಆಗಿದ್ದು. ಅವರನ್ನು ಬಿಟ್ಟು ಹೇಗೆ ಇರಬೇಕು? ಆದ್ದರಿಂದ ನನ್ನನ್ನು ಗಂಗಾವತಿಯಲ್ಲಿ ಕ್ವಾರಂಟೈನ್ ಮಾಡಿ’ ಎಂದು ಯುವತಿ ಮನವಿ ಮಾಡಿದಳು. ಕೊಪ್ಪಳ ಜಿಲ್ಲಾಧಿಕಾರಿ ಅವರೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಆಕೆಯನ್ನು ಸಮಾಧಾನಪಡಿಸಿದರು. ನಂತರ ಯುವತಿ ಸರ್ಕಾರಿ ಕ್ವಾರಂಟೈನ್ಗೆ ತೆರಳಿದಳು.
ತಪಾಸಣೆಗೆ ನಿರಾಕರಣೆ: ಮುಂಬೈನಿಂದ ಬಂದಿದ್ದ ವ್ಯಕ್ತಿಯೊಬ್ಬ ಸ್ಕ್ರೀನಿಂಗ್ ಮಾಡಿಸಿಕೊಳ್ಳಲು ಮತ್ತು ಕ್ವಾರಂಟೈನ್ ಆಗಲು ನಿರಾಕರಿಸಿದಲ್ಲದೆ, ಆಂಗ್ಲ ಭಾಷೆಯಲ್ಲಿ ಅಧಿಕಾರಿಗಳನ್ನು ದಬಾಯಿಸತೊಡಗಿದ್ದ. ಇದನ್ನು ಅರಿತ ಆರೋಗ್ಯ ಇಲಾಖೆ ಸಿಬ್ಬಂದಿಯು ಪೊಲೀಸರ ಸಹಾಯದ ಮೂಲಕ ಪ್ರಾಥಮಿಕ ಪರೀಕ್ಷೆ ನಡೆಸಿ ಅವರನ್ನು ಕ್ವಾರಂಟೈನ್ಗೆ ಕಳಿಸಿದರು.