ಜಿಲ್ಲೆ

ಮುಂಬೈನಲ್ಲಿ ಡಾ. ಅಂಬೇಡ್ಕರ್ ಜಯಂತಿ

ಬೀದರ್: ಏಪ್ರಿಲ್ 14 ರಂದು ಮುಂಬೈನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲು ನಿರ್ಧರಿಸಿರುವ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಿಂದ ಮುಂಬೈ ವರೆಗೆ ದೇಶ ಭಕ್ತರ ಯಾತ್ರೆ ನಡೆಸಲು ನಿರ್ಧರಿಸಿದೆ.
ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಏಪ್ರಿಲ್ 13 ರಂದು ಬೆಳಿಗ್ಗೆ 8ಕ್ಕೆ ಚಿಂಚೋಳಿ ಸಮೀಪದ ಭಾರತ ಮಾತಾ ಮಂದಿರದಿಂದ ಯಾತ್ರೆ ಶುರುವಾಗಲಿದೆ. ಬೀದರ್ ಜಿಲ್ಲೆ, ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಮೂಲಕ ಹಾಯ್ದು ಮುಂಬೈಗೆ ತಲುಪಲಿದೆ ಎಂದು ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದ್ದಾರೆ.
ಸಮಿತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಗಿದೆ. ಈ ಬಾರಿ ವಾಣಿಜ್ಯ ನಗರಿ ಮುಂಬೈನಲ್ಲಿ ಜಯಂತಿ ಆಚರಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಏ. 14 ರಂದು ಬೆಳಿಗ್ಗೆ 9ಕ್ಕೆ ಮುಂಬೈನ ದಾದರ್‍ನ ಚೈತ್ಯ ಭೂಮಿಯಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು. ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಅಲ್ಲಿಯ ವಿರಾರದ ಶಿವ ಮಂದಿರದ ಹವಾ ಮಲ್ಲಿನಾಥ ಮಹಾರಾಜರ ಆಶ್ರಮದಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಣೆ ಜರುಗಲಿದೆ. ಖ್ಯಾತ ಚಿಂತಕರು ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ರಾಜಸ್ತಾನ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ದೇಶ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಮುಂಬೈನಲ್ಲಿ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಊಟ, ವಸತಿ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.